ಕಾರವಾರ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದ ಹೊರಗೆ ಹಾಗೂ ಒಳಗೆ ಉತ್ತರ ಕನ್ನಡದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೂಗು ಗುರುವಾರ ಅನುರಣಿಸಿತು. ಆದರೆ, ವೈದ್ಯಕೀಯ ಶಿಕ್ಷಣ ಸಚಿವರಿಂದ `ಆಮೇಲೆ ನೋಡೋಣ, ಪ್ರಯತ್ನ ಮಾಡೋಣ' ಎಂಬ ಹಿಂದಿನ ಭರವಸೆ ಮಾತ್ರ ಸಿಕ್ಕಿತು.
ಜಿಲ್ಲೆಗೆ ಮೆಡಿಕಲ್ ಕಾಲೇಜ್ ಸಹಿತ ಎರಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಸುವರ್ಣ ವಿಧಾನಸೌಧದ ಎದುರು ಧರಣಿ ನಡೆಯಿತು. ಧರಣಿ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಭರವಸೆ ನೀಡಿದರು. ವಿಧಾನಸಭೆ ಒಳಗೆ ಜಿಲ್ಲೆಯ ನಾಲ್ವರು ಶಾಸಕರು ಈ ಕುರಿತು ತಮ್ಮ ಬೇಡಿಕೆ ಮಂಡಿಸಿದರು.
ಶಾಸಕ ಸತೀಶ ಸೈಲ್ ಕೇಳಿದ ಪ್ರಶ್ನೆಗೆ ಸಚಿವ ಶರಣಪ್ರಕಾಶ ಪಾಟೀಲ ಲಿಖಿತ ಉತ್ತರ ನೀಡಿದ್ದರು.ಆದರೆ, ಅದಕ್ಕೆ ಸಮಾಧಾನಗೊಳ್ಳದ ಸತೀಶ ಸೈಲ್, ಸರ್ಕಾರಿ ಮೆಡಿಕಲ್ ಕಾಲೇಜ್ ಸಿದ್ದರಾಮಯ್ಯ ಸರ್ಕಾರ ಮಂಜೂರು ಮಾಡಿ 8 ವರ್ಷ ಆಯಿತು. ಆದರೆ, ಉತ್ತರ ಕನ್ನಡದ ವೈದ್ಯಕೀಯ ವ್ಯವಸ್ಥೆ ಸುಧಾರಿಸಿಲ್ಲ. ಚತುಷ್ಪಥ ನಿರ್ಮಾಣದಲ್ಲಿದ್ದು, ಅಪಘಾತಗಳು ಹೆಚ್ಚುತ್ತಿವೆ. ರೋಗಗಳು ಹೆಚ್ಚಿವೆ. ಮೊದಲು ಗೋವಾ ರಾಜ್ಯದಲ್ಲಿ ಚಿಕಿತ್ಸೆ ದೊರೆಯುತ್ತಿತ್ತು. ಈಗ ಆಯುಷ್ಮಾನ್ ಯೋಜನೆಯಿದ್ದರೂ ಗೋವಾ ರಾಜ್ಯದಲ್ಲೂ ಜಿಲ್ಲೆಯವರಿಗೆ ಚಿಕಿತ್ಸೆ ಅಲಭ್ಯ.ಕೈಗಾ ಅಣು ಸ್ಥಾವರ, ಭಾರತೀಯ ನೌಕಾಸೇನೆ ಸೇರಿ 60 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ರೋಗವಾದರೆ, ಅಪಘಾತವಾದರೆ ಅವರನ್ನು ಮಂಗಳೂರಿಗೆ ಕೊಂಡೊಯ್ಯಬೇಕು. ಆದರೆ, ಅಷ್ಟು ದೂರ ಹೋಗುವಾಗ ರೋಗಿ ಅಥವಾ ಗಾಯಾಳುಗಳು ಪ್ರಾಣ ಕಳೆದುಕೊಳ್ಳುತ್ತಾರೆ. ಕಾರವಾರ ಕ್ರಿಮ್ಸ್ನಲ್ಲಿ ಟ್ರಾಮಾ ಸೆಂಟರ್‌ಗಾಗಿ ಕೆಲಸ ನಡೆಯುತ್ತಿದೆ. ಸೂಪರ್ ಸ್ಪೆಷಾಲಿಟಿ ಕೆಲಸ ನಡೆಯುತ್ತಿದೆ ಎಂದು ಸಚಿವರು ಉತ್ತರ ನೀಡುತ್ತಿದ್ದಾರೆ. ಆದರೆ, ವಿಳಂಬವಾದಲ್ಲಿ ಸಾಕಷ್ಟು ಜನ ಪ್ರಾಣ ಕಳೆದುಕೊಳ್ಳಲಿದ್ದಾರೆ. ಹಾಗಾಗಿ ಕೈಗಾರಿಕೆಗಳ ಸಾಮಾಜಿಕ ಜವಾಬ್ದಾರಿ ನಿಧಿಯಾದರೂ ಪಡೆದು, ಶೀಘ್ರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸದ್ಯಕ್ಕೆ ಕಾರವಾರದಲ್ಲಿ ಮಾಡಿಕೊಡಿ. ನಂತರ ಕುಮಟಾ, ಶಿರಸಿಯಲ್ಲಿ ಬೇರೆ ಆಸ್ಪತ್ರೆ ಮಾಡಬಹುದು ಎಂದರು.
ಇದನ್ನೂ ಓದಿ: ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವಿಚಾರ ಅವೇಶನದಲ್ಲಿ ಶಾಸಕರು ಧ್ವನಿ ಎತ್ತಲಿ-ಅನಂತಮೂರ್ತಿ ಹೆಗಡೆ
ಭಿನ್ನ ಧ್ವನಿ
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವಿಚಾರದಲ್ಲಿ ಜಿಲ್ಲೆಯ ಶಾಸಕರಿಂದ ಭಿನ್ನ ಧ್ವನಿ ಸದನದಲ್ಲಿ ಕೇಳಿ ಬಂತು. ಸತೀಶ ಸೈಲ್ ಕಾರವಾರದ ಮೆಡಿಕಲ್ ಕಾಲೇಜ್ ವಿಚಾರ ಮಾತನಾಡಿದರೆ. ದಿನಕರ ಶೆಟ್ಟಿ ಮಾತನಾಡಿ, ಕುಮಟಾ ಜಿಲ್ಲೆಯ ಮಧ್ಯವರ್ತಿ ಸ್ಥಳ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಈಗಾಗಲೇ ನಾವು ಜಾಗ ನೀಡಿದ್ದೇವೆ. ಕುಮಟಾದಲ್ಲೇ ಆಸ್ಪತ್ರೆಯಾಗಬೇಕು. ಕೊನೇ ಘಳಿಗೆಯಲ್ಲಿ ಕಾರವಾರದಲ್ಲಿ ಅಥವಾ ಜಿಲ್ಲೆಗೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು ಎಂದು ವಾದ ಮಂಡಿಸಿದರು. ಭೀಮಣ್ಣ ನಾಯ್ಕ ಶಿರಸಿಯಲ್ಲಿ ಆಗಬೇಕು ಎಂದು ಒತ್ತಾಯಿಸಿದರು. ಶಿವರಾಮ ಹೆಬ್ಬಾರ ಜಿಲ್ಲೆ ಭೌಗೋಳಿಕವಾಗಿ ದೊಡ್ಡದಿದೆ. ಕರಾವಳಿಗೆ ಕುಮಟಾದಲ್ಲಿ ಒಂದು, ಘಟ್ಟದ ಮೇಲಿನ ತಾಲೂಕುಗಳಿಗಾಗಿ ಶಿರಸಿಯಲ್ಲಿ ಒಂದು ಆಸ್ಪತ್ರೆ ಬೇಕು ಎಂದು ಪ್ರತಿಪಾದಿಸಿದರು. ಸ್ಥಳ ಯಾವುದು ಎಂಬುದನ್ನು ನಿರ್ಧರಿಸಿ ಎಂದು ಸಚಿವ ಶರಣಪ್ರಕಾಶ ಪಾಟೀಲರಿಗೆ ಸ್ಪೀಕರ್ ಸೂಚಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಉತ್ತರ ನೀಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಕೂಗು ಬಹಳ ದಿನಗಳಿಂದ ಇದೆ. ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟುವುದನ್ನು ಮುಂದೆ ನೋಡೋಣ, ಎಲ್ಲಿ ಮಾಡಿದರೆ ಒಳ್ಳೆಯದು ಎಂಬುದನ್ನು ಪರಿಶೀಲನೆ ಮಾಡೋಣ. ಆದರೆ, ಈಗ ಕಾರವಾರದ ಸರ್ಕಾರಿ ಮೆಡಿಕಲ್ ಕಾಲೇಜ್‌ನ್ನು ೪೫೦ ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಕಾರ್ಯ ನಡೆದಿದೆ. ಅದನ್ನು ಶೀಘ್ರ ನಿರ್ಮಾಣ ಮಾಡಲಾಗುವುದು. ಕಾರವಾರದ ಸರ್ಕಾರಿ ಮೆಡಿಕಲ್ ಕಾಲೇಜ್‌ನಲ್ಲಿ ಹೃದ್ರೋಗ, ನರ ರೋಗ, ಮಕ್ಕಳ ಶಸ್ತ್ರ ಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ಊರಾಲಜಿ, ನೆಪ್ರಾಲಜಿ ಮುಂತಾದ ಸೂಪರ್ ಸ್ಪೆಷಾಲಿಟಿ ವೈದ್ಯರ ನೇಮಕವನ್ನೂ ಈಗಾಗಲೇ ಮಂಜೂರಿ ಮಾಡಿದ್ದೇವೆ. ಎರಡು ಬಾರಿ ಈ ಎಲ್ಲ ವೈದ್ಯರ ನೇಮಕಕ್ಕೆ ಅರ್ಜಿ ಆಹ್ವಾನಿಸಿದರೂ ಯಾರೂ ಬಂದಿಲ್ಲ. ಇನ್ನೊಮ್ಮೆ ಅರ್ಜಿ ಕರೆಯಲಾಗಿದೆ. ಶಾಸಕರು ಹೇಳುವುದು ಸರಿ ಇದೆ. ಅಲ್ಲಿ ಸ್ವಲ್ಪ ರಿಮೋಟ್ ಪ್ರದೇಶ ಇರುವುದರಿಂದ ಸಂಪರ್ಕ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದರು.
ಇದೊಂದು ಬಹಳ ಗಂಭೀರ ವಿಚಾರ ಕಾರವಾರದಿಂದ ಮಂಗಳೂರುವರೆಗೂ ಎಲ್ಲೂ ಟ್ರಾಮಾ ಸೆಂಟರ್ ಇಲ್ಲ. ನಾನು ಆರೋಗ್ಯ/ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದಾಗ ಕಾರವಾರದಲ್ಲಿ ಮೆಡಿಕಲ್ ಕಾಲೇಜ್ ಪ್ರಾರಂಭವಾಯಿತು. ಆಯುಷ್ಮಾನ್ ಭಾರತ ಯೋಜನೆಯಲ್ಲಿ ಹೊರ ರಾಜ್ಯಗಳಲ್ಲೂ ರಾಜ್ಯದ ರೋಗಿಗಳಿಗೆ ಮೊದಲು ಚಿಕಿತ್ಸೆ ಸಿಗುತ್ತಿತ್ತು. ಕಾರವಾರದ ರೋಗಿಗಳಿಗೆ ಗೋವಾದಲ್ಲಿ, ವಿಜಯಪುರದ ರೋಗಿಗಳಿಗೆ ಸೊಲ್ಲಾಪುರದಲ್ಲಿ ಚಿಕಿತ್ಸೆ ಕೊಡಿಸಬಹುದಿತ್ತು. ಆದರೆ, ಈಗ ಗೋವಾದಲ್ಲಿ ಏಕೆ ಕಾರವಾರದ ರೋಗಿಗಳಿಗೆ ಆಯುಷ್ಮಾನ್ ಸಿಗುತ್ತಿಲ್ಲವೋ ಗೊತ್ತಿಲ್ಲ.ರಾಜ್ಯ ಮುಖ್ಯವಲ್ಲ. ರೋಗಿ ಮುಖ್ಯ. ಆರೋಗ್ಯ ಸಚಿವರು ಈ ಕುರಿತು ಪರಿಶೀಲಿಸಿ ಕ್ರಮ ವಹಿಸಬೇಕು.ಯು.ಟಿ.ಖಾದರ್ವಿಧಾನಸಭೆ ಸ್ಪೀಕರ್