ಜಿಲ್ಲೆ

ಪ್ರಜೆಗಳ ಶಕ್ತಿಯ ಅರಿವು ಮೂಡಲಿ :ಪ್ರಭಾಕರ ಖಜೂರೆ ಅಭಿಮತ

ಸೌಮ್ಯ ಆರ್

ಸುಬ್ರಹ್ಮಣ್ಯ: ಚುನಾವಣೆಯು ಪ್ರಜಾಪ್ರಭುತ್ವ ದೇಶದ ಪ್ರಮುಖ ಅಂಶ. ಮತದಾನ ಅನ್ನುವುದು ನಮ್ಮ ಹಕ್ಕು ಮಾತ್ರವಲ್ಲ ಅದು ನಮ್ಮ ಶಕ್ತಿಯಾಗಿದೆ ಅನ್ನುವ ಅರಿವು ಸರ್ವರಲ್ಲೂ ಮೂಡಿಬರಬೇಕು ಎಂದು ಸಹಾಯಕ ಮತದಾರ ನೋಂದಣಾಧಿಕಾರಿ ಮತ್ತು ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ ಹೇಳಿದರು.

ಭಾರತ ಚುನಾವಣಾ ಆಯೋಗ, ಕಡಬ ತಾಲೂಕು ಪಂಚಾಯಿತಿ, ಕಡಬ ತಾಲೂಕು ಆಡಳಿತ, ಎಸ್‌ಎಸ್‌ಪಿಯು ಕಾಲೇಜಿನ ಮತದಾರರ ಸಾಕ್ಷರತಾ ಸಂಘ ಸಂಯುಕ್ತ ಆಶ್ರಯದಲ್ಲಿ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಶನಿವಾರ ನಡೆದ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 15ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಎಸ್‌ಎಸ್‌ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಶಾಸ್ತ್ರ ಉಪನ್ಯಾಸಕಿ ಮತ್ತು ಮತದಾರರ ಸಾಕ್ಷರತಾ ಸಂಘದ ಸಂಚಾಲಕಿ ಜಯಶ್ರೀ ವಿ.ದಂಬೆಕೋಡಿ, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್‌ಬಾಬು ಆರ್., ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಪ್ರಮೋದ್ ಕುಮಾರ್ ಕೆ.ಕೆ., ಪ್ರೌಢಶಾಲಾ ಮುಖ್ಯಶಿಕ್ಷಕ ನಂದಾ ಹರೀಶ್ ಮುಖ್ಯಅತಿಥಿಗಳಾಗಿದ್ದರು. ಉಪತಹಸೀಲ್ದಾರ್ ಮಂಜುನಾಥ್, ಪಂಚಾಯತ್‌ರಾಜ್ ಇಲಾಖೆ ಸಹಾಯಕ ಅಧಿಕಾರಿ ಯಶವಂತ್, ಸುಬ್ರಹ್ಮಣ್ಯ ಪಂಚಾಯಿತಿ ಕಾರ್ಯದರ್ಶಿ ಮೋನಪ್ಪ ಡಿ. ಸುಬ್ರಹ್ಮಣ್ಯ ಗ್ರಾಮ ಆಡಳಿತಾಧಿಕಾರಿ ರವಿಚಂದ್ರ, ಗ್ರಾಮ ಕರಣಿಕ ಪುರುಷೋತ್ತಮ್ ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು.