ಜಿಲ್ಲೆ

ಉತ್ತರ ಕನ್ನಡದಲ್ಲಿ ಹುಲಿಗಳೆಷ್ಟಿವೆ..? ಇಲ್ಲಿದೆ ಮಾಹಿತಿ

Uttara Kannada - Subash Hegde

ಕಾರವಾರ: ಅಲ್ಲಿ ಹುಲಿ, ಬಂತು, ಇಲ್ಲಿ ದನ ತಿಂದು ಹೋಯಿತು ಎಂದು ಜಿಲ್ಲೆಯ ವಿವಿಧೆಡೆ ಆಗಾಗ ಸುದ್ದಿಯಾಗುತ್ತಿರುತ್ತದೆ. ಜಿಲ್ಲೆಯ ವಿವಿಧೆಡೆ ಆಗಾಗ ರಸ್ತೆಯಲ್ಲಿ ಓಡಾಡುವ ಹುಲಿಗಳ ವಿಡಿಯೋವೂ ವೈರಲ್‌ ಆಗುತ್ತದೆ. ಹಾಗಾದರೆ ಜಿಲ್ಲೆಯಲ್ಲಿ ಹುಲಿಗಳೆಷ್ಟಿವೆ ಎಂಬ ಪ್ರಶ್ನೆಗೆ ನಿಖರ ಉತ್ತರ ಇಲ್ಲಿದೆ.

2021-22 ನೇ ಸಾಲಿನಲ್ಲಿ 3 ತಿಂಗಳು ನಡೆದ ಹುಲಿ ಗಣತಿಯ ವರದಿಯನ್ನು ಗುರುವಾರ ಬೆಂಗಳೂರಿನಲ್ಲಿ ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಉತ್ತರ ಕನ್ನಡದ ಕಾಳಿ ಹುಲಿ ಅಭಯಾರಣ್ಯ ಹಾಗೂ ಇತರ ಮೂರು ಅರಣ್ಯ ವಲಯಗಳ ಹುಲಿ ಗಣತಿಯ ವಿವರ ಪ್ರಕಟಿಸಲಾಗಿದೆ.

ಕೆಟಿಆರ್‌ನಲ್ಲಿ ಒಟ್ಟು 448 ಕ್ಯಾಮರಾ ಇರಿಸಿ ಗಣತಿ ಮಾಡಲಾಗಿತ್ತು. ಅದರಲ್ಲಿ 1 ಮರಿ ಹಾಗೂ 19 ಪ್ರಾಪ್ತ ಹುಲಿಗಳು ಹಾಗೂ ಉತ್ತರ ಕನ್ನಡದ ಇತರ ಮೂರು ವಲಯಗಳಲ್ಲಿ ಒಟ್ಟು ನಾಲ್ಕು ಹುಲಿಗಳಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಬೆಳಗಾವಿ ವಲಯದಲ್ಲಿ 124 ಕ್ಯಾಮರಾ ಇರಿಸಲಾಗಿತ್ತು. ಅಲ್ಲಿ 8 ಹುಲಿಗಳು ಪತ್ತೆಯಾಗಿದ್ದು, ಅದರಲ್ಲಿ 1 ಕೆಟಿಆರ್‌ಗೆ ಸೇರಿದ್ದಾಗಿದೆ. ಹಳಿಯಾಳ ಅರಣ್ಯ ವಲಯದಲ್ಲಿ 106 ಕ್ಯಾಮರಾ ಇರಿಸಲಾಗಿತ್ತು. ಅದರಲ್ಲಿ 2 ಹುಲಿಗಳು ಪತ್ತೆಯಾಗಿದ್ದು, 1 ಕೆಟಿಆರ್ ವ್ಯಾಪ್ತಿಗೆ ಸೇರಿದೆ.

ಕಾರವಾರ ಅರಣ್ಯ ವಲಯದಲ್ಲಿ 135 ಕ್ಯಾಮರಾ ಇರಿಸಲಾಗಿತ್ತು. ಪತ್ತೆಯಾದ 2 ಹುಲಿಗಳಲ್ಲಿ 1 ಕೆಟಿಆರ್‌ನಲ್ಲೂ ಸಿಕ್ಕಿದೆ.ಯಲ್ಲಾಪುರ ವಲಯದಲ್ಲಿ 94 ಕ್ಯಾಮರಾ ಇರಿಸಲಾಗಿದ್ದು, 4 ಹುಲಿಗಳು ಪತ್ತೆಯಾಗಿವೆ. ಅದರಲ್ಲಿ 2 ಕೆಟಿಆರ್‌ನಲ್ಲೂ ಕಂಡಿವೆ.

ಶಿರಸಿ ವಲಯದಲ್ಲಿ 107 ಕ್ಯಾಮರಾ ಇರಿಸಿದ್ದರೂ ಯಾವುದೇ ಹುಲಿಗಳು ಪತ್ತೆಯಾಗಿಲ್ಲ. ಹೊನ್ನಾವರ ವಲಯದಲ್ಲೂ ಸರ್ವೇ ನಡೆಸಲಾಗಿದ್ದು, ಯಾವುದೇ ಹುಲಿ ಕಂಡಿಲ್ಲ.

ಹುಲಿಗಳ ವಲಸೆ

ಕೆಟಿಆರ್‌ನಲ್ಲಿ 2014 ರ ಗಣತಿಯಲ್ಲಿ 3 ಹಾಗೂ 2018 ರ ಗಣತಿಯಲ್ಲಿ 4 ಹುಲಿಗಳು ಮಾತ್ರ ಕಂಡುಬಂದಿದ್ದವು. ಈ ವರದಿಯಲ್ಲಿ ಹುಲಿಗಳ ಸಂಖ್ಯೆ ಸುಮಾರು ಐದು ಪಟ್ಟು ಹೆಚ್ಚಿದೆ. ಆದರೆ, ರಾಜ್ಯದ ಬಂಡಿಪುರ, ನಾಗರಹೊಳೆ, ಭದ್ರಾ ಮುಂತಾದ ಹುಲಿ ಸಂರಕ್ಷಿತ ಅಭಯಾರಣ್ಯಗಳಿಗೆ ಹೋಲಿಸಿದರೆ ಇಲ್ಲಿರುವ ಹುಲಿಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ.
2020 ರ ವಾರ್ಷಿಕ ಹುಲಿ ವರದಿಯಲ್ಲಿ ಕೆಟಿಆರ್ ವ್ಯಾಪ್ತಿಯಲ್ಲಿ 22 ಹುಲಿಗಳಿವೆ ಎಂದು ಪ್ರಸ್ತಾಪಿಸಲಾಗಿತ್ತು. ಹುಲಿಗಳ ಸಂಖ್ಯೆಯಲ್ಲಿ ಹೀಗೆ ಏರಿಳಿತವಾಗುವುದಕ್ಕೆ ಕಾರಣವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ(ಕೆಟಿಆರ್) ವ್ಯಾಪ್ತಿಯಲ್ಲಿ ಬೇಟೆಯ ಕೊರತೆ ಇಲ್ಲಿ ಹುಲಿಗಳ ಸಂಖ್ಯೆ ರಾಜ್ಯದ ಇತರ ಹುಲಿ ಅಭಯಾರಣ್ಯಗಳಿಗಿಂತ ಕಡಿಮೆ ಇರಲು ಕಾರಣ ಎಂದು ತಿಳಿಸಲಾಗಿದೆ.

ಅಲ್ಲದೆ, ಅವು ವಿವಿಧ ಕಾರಣಗಳಿಗೆ ಬೇರೆಡೆ ವಲಸೆ ಹೋಗುತ್ತವೆ. ಅವು, ಪಕ್ಕದ ಗೋವಾದ ಸಂರಕ್ಷಿತ ಅಭಯಾರಣ್ಯವ್ಯಾಪ್ತಿಯಲ್ಲಿ ಓಡಾಡಿರುವುದು ಕಂಡುಬದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.


ಹೇಗೆ ನಡೆಯುತ್ತದೆ ಹುಲಿ ಗಣತಿ.?

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹುಲಿಗಳ ಗಣತಿ ನಡೆಸಲಾಗುತ್ತದೆ. ಆಯ್ದ ಸ್ಥಳಗಳಲ್ಲಿ ತನ್ನಿಂದ ತಾನೇ ಫೋಟೋ ಕ್ಲಿಕ್ಕಿಸಬಹುದಾದ ಕ್ಯಾಮರಾಗಳನ್ನು ಇರಿಸಲಾಗುತ್ತದೆ.

ಸೆನ್ಸರ್‌ ಆಧಾರದ ಮೇಲೆ ಕ್ಯಾಮರಾವು ತನ್ನೆದುರು ಯಾವುದೇ ವಸ್ತು ಹಾದು ಹೋದರೂ ಚಿತ್ರ ದಾಖಲಿಸುತ್ತದೆ. ಆ ಚಿತ್ರಗಳನ್ನು ಸಂಗ್ರಹಿಸಿ ಕ್ಯಾಮರಾ ಟ್ರಾಪ್ ಡೇಟಾ ರೆಸ್ಪಾಂಡರಿ ಆ್ಯಂಡ್ ಅನಾಲಿಸಿಸ್ ಎಂಬ ವೆಬ್‌ಸೈಟ್‌ಗೆ ಹಾಕಲಾಗುತ್ತದೆ. ಅದು ಎಐ ಸಹಾಯದಿಂದ ಹುಲಿಗಳು ಹಾಗೂ ಇತರ ಪ್ರಾಣಿಗಳ ಚಿತ್ರವನ್ನು ಬೇರ್ಪಡಿಸುತ್ತದೆ.

ಹುಲಿಗಳ ಚಿತ್ರವನ್ನು ವಿಶೇಷ ಸಾಫ್ಟ್ವೇರ್ ಬಳಸಿ ಹೋಲಿಕೆ ಮಾಡಲಾಗುತ್ತದೆ. ಮತ್ತು ಪ್ರತಿ ಹುಲಿಗೆ ಒಂದು ವಿಶೇಷ ಗುರುತಿನ ಸಂಖ್ಯೆ ನೀಡಲಾಗುತ್ತದೆ.

ಪ್ರತಿ ಮನುಷ್ಯನ ಕೈ ಬೆರಳ ಗುರುತು(ಫಿಂಗರ್‌ ಪ್ರಿಂಟ್‌) ವಿಭಿನ್ನವಾಗಿದ್ದಂತೆ ಪ್ರತಿ ಹುಲಿಯ ಮೈಮೇಲಿನ ಪಟ್ಟೆಗಳು ವ್ಯತ್ಯಾಸವಿರುತ್ತದೆ. ಅದನ್ನೇ ಆಧರಿಸಿ ವಿಶೇಷ ಸಾಫ್ಟ್ವೇರ್ ಪ್ರತಿ ಹುಲಿಯ ಗುರುತು ಹಿಡಿಯುತ್ತದೆ.

ಈ ಸಂದರ್ಭದಲ್ಲಿ ಒಂದುವರೆ ವರ್ಷ ಮೇಲ್ಪಟ್ಟ ಪ್ರಾಪ್ತ ಹುಲಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಕಾಳಿ ಸಂರಕ್ಷಿತ ಅಭಯಾರಣ್ಯ ವ್ಯಾಪ್ತಿಯಲ್ಲಿ ಕ್ಯಾಮರಾ ಟ್ರಾಪ್‌ನಲ್ಲಿ 105 ಹುಲಿಗಳ ಚಿತ್ರ ದಾಖಲಾಗಿತ್ತು. 86 ಚಿತ್ರಗಳು ರಿಪೀಟ್‌ ಆಗಿದ್ದವು.

ಹುಲಿಗಳಿಗೆ ಬೇಟೆ ಹೆಚ್ಚಿಸಲು ಕ್ರಮ

ಕಾಳಿ ಸಂರಕ್ಷಿತ ಹುಲಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಹುಲಿಗಳು ಹೆಚ್ಚು ಇರುವಂತೆ ನೋಡಿಕೊಳ್ಳಲು ಮೈಸೂರು ಮೃಗಾಲಯದಿಂದ ಇಲ್ಲಿಗೆ ಜಿಂಕೆಗಳನ್ನು ತಂದು ಬಿಡಲಾಗುತ್ತಿದೆ. ಜಿಂಕೆಗಳಿಗೆ ಹುಲ್ಲುಗಾವಲು ವೃದ್ಧಿಸುವ ಪ್ರಯತ್ನ ನಡೆದಿದೆ. ಮುಖ್ಯವಾಗಿ ಪ್ರಾಣಿಗಳ ಬೇಟೆ ತಡೆಯಲು ಕ್ರಮ ವಹಿಸಲಾಗಿದೆ. ಇದರಿಂದ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ ಎಂದು ಕೆಟಿಆರ್ ಅಧಿಕಾರಿಗಳು ಹೇಳುತ್ತಾರೆ.

  • ಕೆಟಿಆರ್‌ ಬಗ್ಗೆ ವಿವರ
  • *814.884 ಚದರ ಕಿಮೀ -ಕೆಟಿಆರ್ ಪ್ರಮುಖ ಪ್ರದೇಶದ ವ್ಯಾಪ್ತಿ
  • *530.8327 ಚದರ ಕಿಮೀ -ಕೆಟಿಆರ್ ಬಫರ್ ಜೋನ್
  • *2007 ರಲ್ಲಿ ಅಣಶಿ ರಾಷ್ಟ್ರೀಯ ಉದ್ಯಾನವನ್ನು ಅಣಶಿ, ದಾಂಡೇಲಿ ಹುಲಿ ಅಭಯಾರಣ್ಯ ಎಂದು ಘೋಷಣೆ
  • *2015 ರಲ್ಲಿ ಹುಲಿ ಅಭಯಾರಣ್ಯಕ್ಕೆ ಕಾಳಿ ಹುಲಿ ಅಭಯಾರಣ್ಯ (ಕೆಟಿಆರ್) ಎಂದು ಮರು ನಾಮಕರಣ
  • *ಆನೆ, ಜಿಂಕೆ, ಕಾಡುನಾಯಿ, ಚಿರತೆ ಇತರ ಪ್ರಾಣಿಗಳ ಆವಾಸ ಸ್ಥಾನ
  • *ಮುಂಗಟ್ಟೆಗಳ ಸಂರಕ್ಷಿತ ಪ್ರದೇಶ ಎಂದು ಗುರುತು

ಸುಭಾಸ ಧೂಪದಹೊಂಡ ಕಾರವಾರ