ಜಿಲ್ಲೆ

ಬಾರ್​-ಮದ್ಯದಂಗಡಿ ಯಾವಾಗಿಂದ ಅತಿ ಅವಶ್ಯಕವಾಯಿತು?; ಸರ್ಕಾರಕ್ಕೆ ಬಿಜೆಪಿ ಶಾಸಕರಿಂದಲೇ ಪ್ರಶ್ನೆ

Webdesk - Ravikanth

ಧಾರಾವಾಡ: ಕರೊನಾ ಪ್ರಕರಣ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹಾಗೂ ಕರೊನಾದಿಂದಾಗಿ ಸಾಯುತ್ತಿರುವವರ ಸಂಖ್ಯೆಯೂ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೈಟ್​-ವೀಕೆಂಡ್​ ಕರ್ಫ್ಯೂ ಹೇರಿದೆ. ಅದಾಗ್ಯೂ ಪರಿಸ್ಥಿತಿ ಹಿಡಿತಕ್ಕೆ ಸಿಗದ್ದರಿಂದ ಲಾಕ್​​ಡೌನ್​ ವಿಧಿಸಬೇಕೇ ಬೇಡವೇ ಎಂಬ ಚರ್ಚೆಯೂ ನಡೆಯುತ್ತಿದೆ.

ಅಂದಹಾಗೆ ಬಾರ್​-ಮದ್ಯದಂಗಡಿಯನ್ನು ಅತಿ ಅಗತ್ಯದ ವಸ್ತು ಎಂದು ಪರಿಗಣಿಸಿ, ನೈಟ್​-ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲೂ ತೆರೆದಿಡಬಹುದು ಎಂದು ಸರ್ಕಾರ ಅವಕಾಶ ನೀಡಿರುವ ಬಗ್ಗೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಗತ್ಯ ವಸ್ತುಗಳಲ್ಲಿ ಮದ್ಯ ಸೇರ್ಪಡೆ ವಿಚಾರವಾಗಿ ಅವರು ಧಾರವಾಡದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಉತ್ತಮ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅತಿ ಅವಶ್ಯಕ ಸಾಮಗ್ರಿಗಳ ಮಾರಾಟ-ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅದರಲ್ಲಿ ಕಿರಾಣಿ ಹಾಗೂ ಆಹಾರಕ್ಕೆ ಅವಕಾಶ ಮಾಡಿಕೊಟ್ಟಿದ್ದನ್ನು ನಾನು ಒಪ್ಪುತ್ತೇನೆ. ಆದರೆ ಬಾರ್​ ಹಾಗೂ ಮದ್ಯದಂಗಡಿ ಯಾವಾಗಿನಿಂದ ಅತಿ ಅವಶ್ಯಕವಾಯಿತು ಎಂದು ಬೆಲ್ಲದ ಪ್ರಶ್ನಿಸಿದ್ದಾರೆ.

ಯಡಿಯೂರಪ್ಪ ಅವರಿಗೆ ಈ ಸಲಹೆಯನ್ನು ಯಾರು ಕೊಟ್ಟಿದ್ದಾರೋ ಗೊತ್ತಿಲ್ಲ. ನಾನು ಇದನ್ನು ಸಂಪೂರ್ಣವಾಗಿ ವಿರೋಧಿಸುತ್ತೇನೆ. ಅತಿ ಅವಶ್ಯಕ ಸಾಮಗ್ರಿಗಳ ಅಂಗಡಿ ಇರಲಿ ಪರವಾಗಿಲ್ಲ. ಆದರೆ ಬಾರ್​-ಮದ್ಯದಂಗಡಿ ಬಂದ್ ಆಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.