ಯಲಬುರ್ಗಾ ತಾಲೂಕಿನ ತಾಳಕೇರಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ವಿದ್ಯಾರ್ಥಿಗಳು ಕೈಬೋರ್ ನೀರಿನಿಂದ ಸ್ನಾನ ಮಾಡುತ್ತಿರುವುದು.  
ಜಿಲ್ಲೆ

ವಸತಿ ಶಾಲೆಯಲ್ಲಿ ನೀರಿನ ಸಮಸ್ಯೆ ಉಲ್ಬಣ

ರುದ್ರಪ್ಪ ವಾಲಿ

ಯಲಬುರ್ಗಾ: ಬೇಸಿಗೆಯ ತಾಪಮಾನ ಅಧಿಕವಾಗುತ್ತಿದ್ದು, ನೀರಿನ ಸಮಸ್ಯೆ ತಲೆದೋರುವ ಲಕ್ಷಣಗಳು ಅಲ್ಲಲ್ಲಿ ಕಾಣಸಿಗುತ್ತಿವೆ. ತಾಲೂಕಿನ ತಾಳಕೇರಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ವಿದ್ಯಾರ್ಥಿಗಳು ನಿತ್ಯ ತೊಂದರೆ ಎದುರಿಸುತ್ತಿದ್ದಾರೆ.

ತಾಲೂಕು ಕೇಂದ್ರದಿಂದ ಅಂದಾಜು 40 ಕಿ.ಮೀ ದೂರದಲ್ಲಿರುವ ತಾಳಕೇರಿ ಹೊರ ವಲಯದಲ್ಲಿರುವ ಮುರಾರ್ಜಿ ವಸತಿ ಶಾಲೆಯಲ್ಲಿ ಹಲವು ದಿನಗಳಿಂದ ನೀರಿನ ಜ್ವಲಂತ ಸಮಸ್ಯೆ ಉಂಟಾಗಿದೆ.

ವಸತಿ ಶಾಲಾ ಮಕ್ಕಳ ಸಲುವಾಗಿ ಸರ್ಕಾರದಿಂದ ಮೂರು ಕೊಳವೆಬಾವಿ ಕೊರೆಯಿಸಲಾಗಿದೆ. ಅವು ಈಗ ಅಂತರ್ಜಲ ಕುಸಿತಗೊಂಡಿದ್ದು, ಕುಡಿಯಲು ಅಲ್ಲದೇ ಬಳಕೆಗೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಜೆಜೆಎಂ ಪೈಪ್‌ಲೈನ್ ವಸತಿ ಶಾಲೆಯಿಂದ ದೂರವಿದ್ದು, ನೀರಿನ ಒತ್ತಡವಿಲ್ಲದ ಪರಿಣಾಮ ಶಾಲೆಗೆ ನೀರು ತಲುಪುತ್ತಿಲ್ಲ. ದಿನಾಲೂ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದ್ದು, ವಿದ್ಯಾರ್ಥಿಗಳು ಬಕೆಟ್ ಹಿಡಿದುಕೊಂಡು ತುಂಬಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸಿ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಮಕ್ಕಳ ಪಾಲಕರು ಒತ್ತಾಯಿಸಿದ್ದಾರೆ.

ಕೈಬೋರ್ ನೀರೇ ಗತಿ: ವಿದ್ಯಾರ್ಥಿಗಳ ನಿತ್ಯದ ಸ್ನಾನಕ್ಕೆ ವಸತಿ ಶಾಲೆಯ ಹತ್ತಿರದ ಗಾಣಧಾಳ ರಸ್ತೆ ಪಕ್ಕದಲ್ಲಿರುವ ಕೈಬೋರ್ ನೀರೇ ಗತಿಯಾಗಿದೆ. ನಿತ್ಯ ನೀರಿಗಾಗಿ ನರಕಯಾತನೆ ಅನುಭವಿಸುತ್ತಿರುವ ವಿದ್ಯಾರ್ಥಿಗಳು ನೀರಿನ ಸಮಸ್ಯೆ ಯಾವಾಗ ಬಗೆಹರಿಯುತ್ತೋ ಎನ್ನುವ ಚಿಂತೆಯಲ್ಲಿದ್ದಾರೆ.

ವಸತಿ ಶಾಲೆಯಲ್ಲಿ ನೀರಿನ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಖಾಸಗಿ ಬೋರ್‌ವೆಲ್‌ನಿಂದ ಪೈಪ್‌ಲೈನ್ ಮಾಡಿಕೊಡುವಂತೆ ಗ್ರಾಪಂಗೆ ಮನವಿ ಮಾಡಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ರಮೇಶ ಬೂದಿಹಾಳ,ತಾಳಕೇರಿ ಎಂಡಿಆರ್‌ಎಸ್ ವಾರ್ಡನ್.
ತಾಳಕೇರಿ ಮುರಾರ್ಜಿ ವಸತಿ ಶಾಲೆಗೆ ಈ ಮುಂಚೆ ಎರಡ್ಮೂರು ಬೋರ್‌ವೆಲ್ ಹಾಕಿಸಿ ಕೊಡಲಾಗಿದೆ. ಅಂತರ್ಜಲ ಮಟ್ಟ ಕುಸಿತದಿಂದ ನೀರು ಕಡಿಮೆಯಾಗಿದ್ದು, ಸಮಸ್ಯೆ ಉಂಟಾಗಿದೆ. ಜೆಜೆಎಂ ನೀರಿನ ಪೈಪ್‌ಲೈನ್ ದೂರವಿದ್ದು, ನೀರು ತಲುಪುತ್ತಿಲ್ಲ. ಶಾಲೆಯ ಹತ್ತಿರ ಖಾಸಗಿ ಬೋರ್‌ವೆಲ್ ಇದ್ದು, ಅದನ್ನು ಬಾಡಿಗೆ ಪಡೆದು ಬಳಸಿಕೊಳ್ಳಲು ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ಚರ್ಚಿಸಲಾಗಿದೆ. ಈ ಬಗ್ಗೆ ಗ್ರಾಪಂ ಪಿಡಿಒಗೆ ತಿಳಿಸಲಾಗಿದೆ. ಶೀಘ್ರ ನೀರಿನ ಸಮಸ್ಯೆ ಬಗೆಹರಿಯಲಿದೆ. ರಿಜ್ವಾನಾ ಬೇಗಂ, ಎಇಇ, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ, ಯಲಬುರ್ಗಾ.