More

    ವಸತಿ ಶಾಲೆಗಳಿಗೆ ಸಿಸಿಟಿವಿ ಅಳವಡಿಸಿ; ಸಲಹಾ ಪೆಟ್ಟಿಗೆ ಕಡ್ಡಾಯವಾಗಲಿ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ರಾಮತ್ನಾಳ

    ಹಾವೇರಿ: ಜಿಲ್ಲೆಯಲ್ಲಿ ಕಾಯನಿರ್ವಹಿಸುತ್ತಿರುವ ವಸತಿ ಶಾಲೆಗಳು ಹಾಗೂ ವಸತಿ ನಿಲಯಗಳಲ್ಲಿ ಈವರೆಗೆ ಸಿಸಿಟಿವಿ ಕ್ಯಾಮರಾ ಹಾಗೂ ಸಲಹಾ ಪೆಟ್ಟಿಗೆಗಳನ್ನು ಅಳವಡಿಸದೇ ಇರುವವರು ತಕ್ಷಣ ಅಳವಡಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಕ್ಕಳ ರಕ್ಷಣಾ ವ್ಯವಸ್ಥೆ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
    ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ಸಿಸಿಟಿವಿ ಕ್ಯಾಮರಾ ಹಾಗೂ ಸಲಹಾ ಪೆಟ್ಟಿಗೆ ಕಡ್ಡಾಯವಾಗಿ ಅಳವಡಿಸಬೇಕು. ಸಿಸಿಟಿವಿ ಕ್ಯಾಮರಾಗಳು ಕಾರ್ಯ ನಿರ್ವಹಿಸುತ್ತಿರುವ ಕುರಿತು ನಿಗಾವಹಿಸಲು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
    ಶಾಲೆಗಳಲ್ಲಿ ಒಂದೇ ನಾಮಫಲಕದಲ್ಲಿ ಮಕ್ಕಳ ಸಹಾಯವಾಣಿ, ತಂಬಾಕು ಮುಕ್ತ ಶಾಲೆ, ಆರ್.ಟಿ.ಇ. ಮಾಹಿತಿ ಎಲ್ಲವನ್ನೂ ಒಂದೇ ನಾಮಫಲಕದಲ್ಲಿ ಮುದ್ರಣ ಮಾಡಿ ಪ್ರದರ್ಶನ ಮಾಡಿರುವುದರಿಂದ ಮಕ್ಕಳಿಗೆ ಗೊಂದಲವಾಗುತ್ತದೆ. ಹಾಗಾಗಿ, ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ನಮೂದಿಸಿ ಲೊಗೋದೊಂದಿಗೆ ನಿರ್ದಿಷ್ಟ ಬಣ್ಣದಲ್ಲಿ ಮುದ್ರಣ ಮಾಡಿ ಶಾಲೆಯ ಮುಖ್ಯ ಭಾಗದಲ್ಲಿ ಅಳವಡಿಸಬೇಕು. ಮಕ್ಕಳ ಸಲಹಾ ಪೆಟ್ಟಿಗೆಯನ್ನು ಮಕ್ಕಳ ಕೈಗೆ ಸಿಗುವಂತೆ ಶಾಲೆಯ ಮುಖ್ಯ ಸ್ಥಳದಲ್ಲಿ ಅಳವಡಿಸಬೇಕು ಎಂದು ನಿರ್ದೇಶನ ನೀಡಿದರು.
    ಶಾಲೆಗಳಲ್ಲಿ ಮಾತ್ರವಲ್ಲದೇ ಪದವಿಪೂರ್ವ ಕಾಲೇಜುಗಳಲ್ಲಿ ಪೋಕ್ಸೋ ಕಾಯ್ದೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತಂತೆ ವಿಚಾರ ಸಂಕಿರಣ, ಸಂವಾದ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದು ಸೂಚಿಸಿದರು.
    ಬಾಲ್ಯ ವಿವಾಹ ತಡೆಯುವಲ್ಲಿ ಶಾಲೆಯ ಮುಖ್ಯೋಪಾಧ್ಯಾಯರ ಪಾತ್ರ ಪ್ರಮುಖವಾಗಿದೆ. ಬಾಲ್ಯವಿವಾಹ ನಡೆಸುವ ಸಲುವಾಗಿ ಮುಖ್ಯೋಪಾಧ್ಯಾಯರಿಗೆ ಶಾಲಾ ದಾಖಲಾತಿಗಳಲ್ಲಿ ವಯೋಮಾನ ತಿದ್ದುಪಡಿ ಮಾಡಿಕೊಡುವಂತೆ ಒತ್ತಡ ಹೇರಲಾಗುತ್ತಿದೆ. ಇಂತಹ ಆಮಿಷಕ್ಕೆ ಒಳಗಾದೇ ಮಕ್ಕಳ ಭವಿಷ್ಯದ ಹಿತವನ್ನು ಕಾಪಾಡುವಂತೆ ಮನವಿ ಮಾಡಿಕೊಂಡರು.
    ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಮಾತನಾಡಿ, ಮಕ್ಕಳ ರಕ್ಷಣಾ ಆಯೋಗ ನೀಡಿದ ಸೂಚನೆ ಹಾಗೂ ಸಲಹೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಿ ಲಿಖಿತ ವರದಿ ನೀಡುವಂತೆ ನಿರ್ದೇಶಿಸಿದರು.
    ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷ ಎಸ್.ಎಚ್.ಮಜೀದ್, ಸಮಾಜ ಕಲ್ಯಾಣಾಧಿಕಾರಿ ರೇಷ್ಮಾ ಕೌಸರ್, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

    ಮೊಬೈಲ್ ಬಳಕೆ ಬಗ್ಗೆ ನಿಗಾ ವಹಿಸಿ
    ಮೊಬೈಲ್ ಗೀಳಿನಿಂದ ಮಕ್ಕಳಲ್ಲಿ ಅಪರಾಧ ಮನೋಭಾವ ಬೆಳೆಯುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಇದರಿಂದ ಸೈಬರ್ ಅಪರಾಧಗಳಲ್ಲಿ ಮಕ್ಕಳು ಸಿಲುಕುತ್ತಿದ್ದಾರೆ. ಪಾಲಕರು ಸೇರಿದಂತೆ ಶಿಕ್ಷಕರು ಮಕ್ಕಳನ್ನು ಮೊಬೈಲ್ ಬಳೆಯಿಂದ ದೂರ ಇಡುವ ಕುರಿತಂತೆ ನಿಗಾ ವಹಿಸಬೇಕು ಎಂದು ರಾಮತ್ನಾಳ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts