More

    ಇಂಡಿಗನತ್ತದಲ್ಲಿ ಇಂದು ಮರು ಮತದಾನ

    ಹನೂರು: ಲೋಕಸಭೆ ಚುನಾವಣೆ 2024ರ ಸಂಬಂಧ ಚಾಮರಾಜನಗರ (ಪ.ಜಾ) ಲೋಕಸಭೆ ಕ್ಷೇತ್ರ ವ್ಯಾಪ್ತಿಯ 221-ಹನೂರು ವಿಧಾನಸಭಾ ಕ್ಷೇತ್ರದ ಇಂಡಿಗನತ್ತ ಗ್ರಾಮದಲ್ಲಿ ಏ.29ರಂದು ಮರು ಮತದಾನ ನಡೆಯಲಿದೆ.


    ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಇಂಡಿಗನತ್ತ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 146ರಲ್ಲಿ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮರು ಮತದಾನ ನಡೆಯಲಿದೆ ಎಂದು ಸಹಾಯಕ ಚುನಾವಣಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


    ನಿಷೇಧಾಜ್ಞೆ ಜಾರಿ: ಇಂಡಿಗನತ್ತದಲ್ಲಿ ಮರು ಮತದಾನ ನಡೆಯಲಿರುವುದರಿಂದ ಮತದಾನ ಕೇಂದ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಏ.28ರ ಮಧ್ಯರಾತ್ರಿಯಿಂದ 29ರ ಮಧ್ಯರಾತ್ರಿವರೆಗೆ ಭಾರತ ದಂಡ ಸಂಹಿತೆ ಕಲಂ 144ರ ಅನ್ವಯ ಮತಗಟ್ಟೆಯ ಸುತ್ತಲು 100 ಮೀ. ಅಂತರದೊಳಗೆ ಕೆಲ ಷರತ್ತುಗಳನ್ನು ವಿಧಿಸಿ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.


    ಮೆರವಣಿಗೆ ಅಥವಾ 5 ಜನರಿಗಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಿದೆ. ಯಾವುದೇ ರೀತಿಯ ಮಾರಕಾಸ್ತ್ರ, ಶಸ್ತ್ರಾಸ್ತ್ರ ಹಾಗೂ ಸ್ಫೋಟಕ ವಸ್ತುಗಳನ್ನು ಒಯ್ಯುವಂತಿಲ್ಲ. ಪ್ರತಿಕೃತಿ ಪ್ರದರ್ಶನ, ದಹನ ಮಾಡುವುದು, ಬಹಿರಂಗ ಘೋಷಣೆ ಹಾಗೂ ಇತ್ಯಾದಿಗಳನ್ನು ನಿರ್ಬಂಧಿಸಿದೆ. ಜತೆಗೆ ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ದೇಶಕಾರಿ ಹಾಡುಗಳು, ಕೂಗಾಡುವುದು, ವ್ಯಕ್ತಿಗಳನ್ನು ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಹಾಗೂ ಸಾರ್ವಜನಿಕರ ಗಾಂಭಿರ್ಯ, ನೈತಿಕತೆಗೆ ಭಂಗ ತರುವಂತಹ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.


    ಈ ಆದೇಶವು ಚುನಾವಣೆ ಕರ್ತವ್ಯನಿರತ ಮತಗಟ್ಟೆ ಅಧಿಕಾರಿ, ಸಿಬ್ಬಂದಿ, ಪೊಲೀಸ್ ಅಧಿಕಾರಿ, ನೇಮಕಗೊಂಡಿರುವ ಚುನಾವಣಾ ಏಜೆಂಟರು ಹಾಗೂ ಒಬ್ಬೊಬ್ಬರಾಗಿ ಮತಗಟ್ಟೆಗೆ ತೆರಳಿ ಮತದಾನ ಮಾಡುವ ಮತದಾರರಿಗೆ ಅನ್ವಯಿಸುವುದಿಲ್ಲ. ಅಂತ್ಯಕ್ರಿಯೆ, ಮೆರವಣಿಗೆ ಹಾಗೂ ಪ್ರಾಧಿಕಾರದಿಂದ ಅನುಮತಿ ಪಡೆದ ಪ್ರಕರಣಗಳಿಗೂ ಅನ್ವಯಿಸುವುದಿಲ್ಲ. ಎಂದು ಜಿಲ್ಲಾಧಿಕಾರಿ ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts