ಜಿಲ್ಲೆ

ಮನೆಗೆಲಸಕ್ಕೆ ಆಳುಗಳನ್ನು ಇರಿಸಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ; 6 ತಿಂಗಳಲ್ಲಿ 21 ಪ್ರಕರಣ!

ಬೆಂಗಳೂರು: ಮನೆಗೆಲಸಕ್ಕೆಂದು ಕೇಳಿಕೊಂಡು ಬರುವವರನ್ನು ಸೇರಿಸಿಕೊಳ್ಳುವ ಮುನ್ನ ಒಮ್ಮೆ ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಏಕೆಂದರೆ ಆರು ತಿಂಗಳಲ್ಲಿ 21 ಮನೆಗಳವು ಪ್ರಕರಣಗಳು ನಡೆದಿದ್ದು, ಎಲ್ಲ ಪ್ರಕರಣಗಳಲ್ಲೂ ಸಾಮ್ಯತೆಯೊಂದು ಕಂಡುಬಂದಿದೆ.

ರಾಜಧಾನಿ ಬೆಂಗಳೂರಿನಲ್ಲಿ ಆರು ತಿಂಗಳಲ್ಲಿ ನಗರದಲ್ಲಿ ಒಟ್ಟು 21 ಮನೆಗಳವು ನಡೆದಿದ್ದು, ಪುಟ್ಟೇನಹಳ್ಳಿ, ಮಾಗಡಿರಸ್ತೆ, ವಿಜಯನಗರ, ಸದಾಶಿವನಗರ ಸೇರಿ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ವಿಶೇಷವೆಂದರೆ ಈ ಎಲ್ಲ ಪ್ರಕರಣಗಳ ಆರೋಪಿಗಳು ನೇಪಾಳಿಗರು.

ಮನೆಗೆಲಸಕ್ಕೆಂದು ಅಥವಾ ಭದ್ರತಾ ಸಿಬ್ಬಂದಿಯ ಕೆಲಕ್ಕೆಂದು ಬರುವ ನೇಪಾಳೀಯರು ಬಳಿಕ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಹಣವನ್ನು ಕದ್ದು ಪರಾರಿಯಾಗುತ್ತಿದ್ದಾರೆ. ಇಂಥ ಪ್ರಕರಣಗಳು 6 ತಿಂಗಳಿನಿಂದ ದಾಖಲಾಗುತ್ತಿದ್ದರೂ ಒಂದೇ ಒಂದು ಕೇಸ್​ನಲ್ಲೂ ಆರೋಪಿಗಳ ಪತ್ತೆಯಾಗಿಲ್ಲ.

ಆರೋಪಿಗಳ ಪತ್ತೆಗಾಗಿ ಪೊಲೀಸರು ನೇಪಾಳಕ್ಕೆ ಹೋಗಿ ಹುಡುಕಾಡಿದ್ದರೂ ಪ್ರಯೋಜನವಾಗಿಲ್ಲ. ಆಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಗೆ ಒಂದೊಂದು ತಂಡದಂತೆ ಪೊಲೀಸರು ನೇಪಾಳಕ್ಕೆ ಹೋಗಿ ಹುಡುಕಾಡಿದರೂ ಬರಿಗೈಯಲ್ಲೇ ವಾಪಸ್ ಬರುವಂತಾಗಿದೆ.