ಜಿಲ್ಲೆ

ಬೆಂಕಿ ಅವಘಡದಿಂದ ಹೋಟೆಲ್‌ಗೆ ಹಾನಿ

ಸೌಮ್ಯ ಆರ್

ಕಾಸರಗೋಡು: ಚಿತ್ತಾರಿ ಚೇಟುಕುಂಡು ಎಂಬಲ್ಲಿ ಅಡುಗೆ ಅನಿಲ ಜಾಡಿಯಿಂದ ವ್ಯಾಪಿಸಿದ ಬೆಂಕಿಯಿಂದ ಮಹಿಳೆಯರು ನಡೆಸುತ್ತಿರುವ ರಸ್ತೆ ಅಂಚಿಗಿರುವ ಸಣ್ಣ ಹೋಟೆಲ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಭಾನುವಾರ ದುರಂತ ಸಂಭವಿಸಿದ್ದು, ಹೋಟೆಲ್‌ನಲ್ಲಿದ್ದವರು ಗಾಯಗಳಿಲ್ಲದೆ ಪಾರಾಗಿದ್ದಾರೆ. ರಾವಣೇಶ್ವರ ನಿವಾಸಿ ಭಾಸ್ಕರನ್ ಎಂಬುವರು ನಡೆಸುತ್ತಿರುವ ಶ್ರೀ ಮೂಕಾಂಬಿಕಾ ಹೆಸರಿನ ವನಿತಾ ಹೋಟೆಲ್ ಇದಾಗಿದ್ದು, ಗ್ಯಾಸ್ ಸಿಲಿಂಡರ್ ಬದಲಾಯಿಸುವ ಸಂದರ್ಭ ಬೆಂಕಿ ತಗುಲಿದೆ. ಬೆಂಕಿ ತಗುಲುತ್ತಿದ್ದಂತೆ ಹೋಟೆಲ್‌ನಲ್ಲಿದ್ದ ಮಹಿಳಾ ಸಿಬ್ಬಂದಿ ಬಹುತೇಕ ಸಾಮಗ್ರಿಯೊಂದಿಗೆ ಹೊರ ಧಾವಿಸಿದ್ದಾರೆ. ಹೋಟೆಲ್ ಒಳಗೆ ಮೂರು ಸಿಲಿಂಡರ್‌ಗಳಿದ್ದುದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ತಕ್ಷಣ ನೀಡಿದ ಮಾಹಿತಿಯನ್ವಯ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಿಯಂತ್ರಿಸಿದ್ದಾರೆ. ಪೊಲೀಸರು ಹಾಗೂ ಸ್ಥಳೀಯರು ಕಾರ್ಯಾಚರಣೆಯಲ್ಲಿ ಸಹಕರಿಸಿದರು.