ಗಂಗೊಳ್ಳಿ: ಹೊಸಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚುಗೋಡು ಎಂಬಲ್ಲಿರುವ ಸಾರ್ವಜನಿಕ ಹಿಂದು ರುದ್ರಭೂಮಿ ಅಗತ್ಯ ಸೌಲಭ್ಯಗಳಿಲ್ಲದೆ ಕೊರಗುತ್ತಿದೆ. ಇಲ್ಲಿಗೆ ಶವದಹನಕ್ಕೆ ಬರುವ ಸಾರ್ವಜನಿಕರು ಇನ್ನಿಲ್ಲದ ಸಮಸ್ಯೆ ಎದುರಿಸಬೇಕಾಗಿದೆ.
ಅಂತ್ಯಸಂಸ್ಕಾರಕ್ಕೆ ಬೇಕಾದ ಯಾವುದೇ ವ್ಯವಸ್ಥೆ ಇಲ್ಲಿಲ್ಲ. ಮಳೆಗಾಲದಲ್ಲಂತೂ ಇಲ್ಲಿನ ಜನರ ಗೋಳು ಹೇಳಲಾರದಷ್ಟು. ಶವದಹನ ಮಾಡುವಾಗ ಮಳೆ ನೀರು ಬೀಳದಂತೆ ಊರಿನ ಜನರೇ ಟಾರ್ಪಾಲ್ ಹಿಡಿದು ನಿಲ್ಲುವ ಹೀನಾಯ ಸ್ಥಿತಿ ಇಲ್ಲಿದೆ.
ಕಂಚುಗೋಡಿನಲ್ಲಿರುವ ಸಾರ್ವಜನಿಕ ಹಿಂದು ರುದ್ರಭೂಮಿ ಹಲವಾರು ವರ್ಷಗಳಿಂದ ಹಾಳಾಗಿದ್ದು, ಶವದಹನ ಮಾಡಲು ಸಾಧ್ಯವಾಗುತ್ತಿಲ್ಲ. ಕಂಚುಗೋಡು, ಖಾರ್ವಿಕೇರಿ, ಭಗತ್‌ನಗರ, ಸನ್ಯಾಸಿಬಲ್ಲೆ ಮೊದಲಾದ ಕಡೆಗಳ ಜನರು ಶವಸಂಸ್ಕಾರಕ್ಕೆ ಇದೇ ರುದ್ರಭೂಮಿಗೆ ಬರಬೇಕು. ಇಲ್ಲಿಗೆ ತೆರಳಲು ಸೂಕ್ತ ರಸ್ತೆಯೂ ಇಲ್ಲ. ಪ್ರಮುಖವಾಗಿ ರುದ್ರಭೂಮಿಗೆ ಮೇಲ್ಛಾಣಿಯೇ ಇಲ್ಲ. ಹೀಗಾಗಿ ಮಳೆಗಾಲದಲ್ಲಿ ಶವಸಂಸ್ಕಾರ ಮಾಡಲು ಕುಟುಂಬಸ್ಥರು ಹರಸಾಹಸ ಪಡಬೇಕು.
ಮೀನುಗಾರರ ಕುಟುಂಬಗಳೇ ಹೆಚ್ಚು ಇರುವ ಕಂಚುಗೋಡಿನಲ್ಲಿ ಶಾಶ್ವತ ಸ್ಮಶಾನಕ್ಕಾಗಿ ನಿವಾಸಿಗಳು ಕಳೆದ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದರು. ಹೊಸಾಡು ಗ್ರಾಮದ ಕಂಚುಗೋಡು ಭಾಗದ ಜನರಿಗೆ ಪ್ರಯೋಜನವಾಗಲೆಂದು ಪ್ರಸಕ್ತ ಸ್ಮಶಾನ ಇರುವ 5 ಸೆಂಟ್ಸ್ ಜಾಗವನ್ನು ಸ್ಥಳದ ಮಾಲೀಕರಾದ ಶಾಂತಿ ಅಬ್ರಹಾಂ ಚಾಕು ಎಂಬುವರು ದಾನ ಮಾಡಿದ್ದರು. ಇದರಿಂದಾಗಿ ಈ ಭಾಗದ ಜನರಿಗೆ ಶಾಶ್ವತ ರುದ್ರಭೂಮಿ ಹೊಂದಲು ಅನುಕೂಲವಾಗಿದೆ. ಕಂಚುಗೋಡು ಸಾರ್ವಜನಿಕ ಹಿಂದು ರುದ್ರಭೂಮಿಯ ಅಭಿವೃದ್ಧಿಗೆ ಸ್ಥಳೀಯಾಡಳಿತ ಹಾಗೂ ಜನಪ್ರತಿನಿಧಿಗಳು ಕೈಜೋಡಿಸಬೇಕಿದೆ.
ರುದ್ರಭೂಮಿಯನ್ನು ಉಳಿಸಿ, ಅಭಿವೃದ್ಧಿ ಮಾಡಬೇಕೆಂಬುದು ಸ್ಥಳೀಯರ ಬೇಡಿಕೆಗೆ ಸ್ಪಂದನೆ ದೊರೆಯಬೇಕಿದೆ. ಶವದಹನ ಸ್ಥಳ ನವೀಕರಿಸಿ, ಮೇಲ್ಛಾವಣಿ ನಿರ್ಮಿಸಬೇಕಿದೆ. ರುದ್ರಭೂಮಿಯ ಸುತ್ತಲೂ ಇಂಟರ್‌ಲಾಕ್ ವ್ಯವಸ್ಥೆ, ಸಮೀಪದಲ್ಲಿ ತೆರೆದ ಬಾವಿ ನಿರ್ಮಾಣ, ಸೋಲಾರ್ ಬೀದಿದೀಪದ ಅಳವಡಿಕೆ, ಸುತ್ತಲೂ ಆವರಣ ಗೋಡೆ ಮತ್ತು ಜನರು ನಿಲ್ಲಲು ಶೆಡ್ ನಿರ್ಮಿಸಬೇಕು. ಇಲ್ಲಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸರ್ಕಾರ ಅನುದಾನವನ್ನೂ ಒದಗಿಸಬೇಕು ಎನ್ನುವುದು ಸಾರ್ವಜನಿಕರ ಬೇಡಿಕೆಯಾಗಿದೆ.
ಕಂಚುಗೋಡು ಖಾರ್ವಿಕೇರಿಯಲ್ಲಿರುವ ಸಾರ್ವಜನಿಕ ಹಿಂದು ರುದ್ರಭೂಮಿ ಕಳೆದ ಹಲವು ವರ್ಷಗಳಿಂದ ಸಂಪೂರ್ಣವಾಗಿ ಹಾಳಾಗಿ ಶವದಹನ ಮಾಡಲು ಸಾಧ್ಯವಾಗುತ್ತಿಲ್ಲ. ಅಗತ್ಯ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಮುಂದಿನ ದಿನಗಳಲ್ಲಿ ಈ ರುದ್ರಭೂಮಿಯನ್ನು ಅಭಿವೃದ್ಧಿಪಡಿಸಿ ಅಗತ್ಯ ಮೂಲಸೌಲಭ್ಯ ಒದಗಿಸಬೇಕು. -ಸದಾಶಿವ ಖಾರ್ವಿ ಕಂಚುಗೋಡುಅಧ್ಯಕ್ಷರು, ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘ, ಗಂಗೊಳ್ಳಿ https://www.vijayavani.net/veterinary-hospital-problem-in-belman