More

    ವಾರಾಹಿ ವರವೋ ಶಾಪವೋ?

    -ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ವಾರಾಹಿ ನೀರಾವರಿ ಯೋಜನೆ…. ಈ ಯೋಜನೆ ಕುರಿತಂತೆ ಚಕಾರ ಎತ್ತಿದರೂ ಸಾಕು ‘ಅದೊಂದು ದೊಡ್ಡ ಜೋಕ್’ ಎಂದು ನಕ್ಕು ಸುಮ್ಮನಾಗುವಷ್ಟು ವಿಶ್ವಾಸ ಕಳೆದುಕೊಂಡಿದೆ. ಇದಕ್ಕೆ ಕಾರಣ 44 ವರ್ಷ ಉರುಳಿದರೂ ವಾರಾಹಿ ನೀರಾವರಿ ಯೋಜನೆ ಪೂರ್ಣಗೊಳ್ಳದಿರುವುದು.

    ಈ ಯೋಜನೆ ಯಾರಿಗೆ ಎಂಬ ಪ್ರಶ್ನೆ ಉದ್ಭವಿಸಿದೆ. ವರ್ಷದಿಂದ ವರ್ಷಕ್ಕೆ ಯೋಜನಾ ವೆಚ್ಚ ಹೆಚ್ಚಿಸಿಕೊಳ್ಳುತ್ತ, ಯಾವುದೇ ಬದ್ಧತೆ ಇಲ್ಲದ ಈ ಯೋಜನೆ ರೈತರಿಗೋ? ಜನಪ್ರತಿನಿಧಿಗಳಿಗೋ? ಅಧಿಕಾರಿಗಳಿಗೋ ಅಥವಾ ಗುತ್ತಿಗೆದಾರರಿಗೋ? ಗೊತ್ತಿದ್ದವರೇ ಹೇಳಬೇಕು.

    ಸುದೀರ್ಘ ಇತಿಹಾಸ

    ಉಡುಪಿ ಜಿಲ್ಲೆಯ 15,702 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 1979ರಲ್ಲಿ ಅಂದಿನ ಸರ್ಕಾರ ವಾರಾಹಿ ನೀರಾವರಿ ಯೋಜನೆಗೆ ಅನುಮೋದನೆ ನೀಡಿತ್ತು. ಯೋಜನೆಗಾಗಿ 9.43 ಕೋಟಿ ರೂ. ಅನುದಾನವನ್ನೂ ನೀಡಿತ್ತು. 2023ಕ್ಕೆ ಅದರ ಯೋಜನಾ ವೆಚ್ಚ 569.53 ಕೋಟಿ ರೂ.ಗೆ ಏರಿಕೊಂಡಿದೆ. 2023 ಮುಗಿಯುತ್ತ ಬಂದರೂ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಬದಲಾಗಿ ಇನ್ನೂ ದರ ಪರಿಷ್ಕರಣೆ ನಡೆಯುತ್ತಲೇ ಇದೆ. ಪರಿಷ್ಕೃತ ಯೋಜನೆ 1,300 ಕೋಟಿ ರೂ.ಗೆ ಏರಿದೆ. ಹೀಗಾಗಿ ಈ ಯೋಜನೆ ಅತಿ ಹೆಚ್ಚು ಅನುದಾನ ಬಳಕೆ, ಸುದೀರ್ಘ ಕಾಮಗಾರಿಗಾಗಿ ಲಿಮ್ಕಾ ಬುಕ್ ಸೇರಿದರೂ ಅಚ್ಚರಿಯಿಲ್ಲ.

    ನೀರಿಗೆ ಸುರಿದದ್ದು ಎಷ್ಟು?

    1979ರಲ್ಲಿ 9.43 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಲಾಗಿದ್ದ ಯೋಜನೆ ಪ್ರಸಕ್ತ 1,302.09 ಕೋಟಿ ರೂ.ಗೆ ಏರಿದೆ. ಮೊದಲ 25 ವರ್ಷದಲ್ಲಿ 37 ಕೋಟಿ ರೂ. ಖರ್ಚು ಮಾಡಲಾಗಿದೆ. ಅರಣ್ಯ, ಭೂಮಿ ಪರಿಹಾರ ಹೀಗೆ ವೆಚ್ಚ ಹೆಚ್ಚಿಸಿಕೊಂಡು 2005ರಲ್ಲಿ 650 ಕೋಟಿ ರೂ. ವೆಚ್ಚದಲ್ಲಿ ಮತ್ತೆ ಹೊಸ ಪ್ರೊಜೆಕ್ಟ್ ಆರಂಭಿಸಿದ್ದು, ಪ್ರಸಕ್ತ ಬರೋಬ್ಬರಿ 375 ಕೋಟಿ ರೂ. ವೆಚ್ಚ ಮಾಡಲಾಗಿದೆ.

    Varaahi 2
    ವಾರಾಹಿ ನೀರು ಕಾಲುವೆಯಲ್ಲಿ ಹರಿದು ರೈತರ ಹೊಲ-ಗದ್ದೆ ಹಸಿರಾಗುಸುವ ಬದಲು ಹಾಡಿಹಕ್ಲು ಸೇರುತ್ತಿರುವುದು.

    2025ಕ್ಕೆ ಪೂರ್ಣ?

    ಇದೀಗ ವಿಧಾನಸಭಾ ಅಧಿವೇಶನದಲ್ಲಿ ನೀರಾವರಿ ಸಚಿವರು 2025ಕ್ಕೆ ವಾರಾಹಿ ಏತ ನೀರಾವರಿ ಯೋಜನೆ ಪೂರ್ಣವಾಗಲಿದೆ ಎಂಬ ಹೇಳಿಕೆ ನೀಡಿದ್ದಾರೆ. ಇದನ್ನು ನಂಬಬೇಕೋ, ಬಿಡಬೇಕೋ ಎಂದು ತಿಳಿಯದಾಗಿದೆ. ಈ ಯೋಜನೆ ಈಗಾಗಲೇ ನಾಲ್ಕು ದಶಕ ಮೊಗಚಿಹಾಕಿದ್ದು, ಯೋಜನಾ ವೆಚ್ಚ ಹೆಚ್ಚಿಸಿಕೊಂಡಿದ್ದೇ ಸಾಧನೆ ಎಂಬಂತಾಗಿದೆ. ‘ಯಾರದ್ದೋ ದುಡ್ಡು, ಯಲ್ಲಮ್ಮನ ಜಾತ್ರೆ’ ಎಂಬ ಮಾತಿನಂತಾಗಿದೆ ಈ ವಾರಾಹಿ ಯೋಜನೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    ಇನ್ನಷ್ಟು ಹಿಗ್ಗಲಿದೆಯೇ ಗಾತ್ರ?

    2003-04ರಲ್ಲಿ 569.53 ಕೋಟಿ ರೂ.ಗೆ ಯೋಜನೆ ಪರಿಷ್ಕೃತಗೊಂಡು, 2006ರಲ್ಲಿ ಸರ್ಕಾರ ಅನುಮೋದನೆ ನೀಡಿತು. ಕಾಲುವೆ ನಿರ್ಮಾಣ, ಅರಣ್ಯ, ಅರಣ್ಯೇತರ ಭೂ ಸ್ವಾಧೀನ ಪರಿಹಾರ ವಿತರಣೆಯಾಗಿ, ವಾರಾಹಿ ಬಲದಂಡೆ ಕಾಲುವೆ 18.72 ಕಿ.ಮೀ., ಎಡ ದಂಡೆ 38 ಕಿ.ಮೀ. ಪೂರ್ಣವಾಗಿದೆ. ಇದೀಗ ರಾಜ್ಯ ಸರ್ಕಾರ 2024-25ರ ಒಳಗೆ ಕಾಮಗಾರಿ ಮುಗಿಸಲು ಮತ್ತೊಂದು ಗಡುವು ನೀಡಿದೆ. ಈ ಹಿಂದೆ ಯೋಜನೆ ವಿಸ್ತರಿಸುವ ಉದ್ದೇಶದಿಂದ 2014-15ರಲ್ಲಿ 1,789.50 ಕೋಟಿ ಪರಿಷ್ಕೃತ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಅದಕ್ಕೆ ಸರ್ಕಾರ ಅನುಮತಿ ನೀಡಿಲ್ಲ. ಒಂದೊಮ್ಮೆ ಸರ್ಕಾರ ಅನುಮತಿ ನೀಡಿದರೆ ಯೋಜನೆಯ ಗಾತ್ರ ಮತ್ತಷ್ಟು ಹಿಗ್ಗಲಿದೆ. ಉಡುಪಿ ನಗರಕ್ಕೆ ಕುಡಿಯುವ ನೀರು ಯೋಜನೆ ಪ್ರಗತಿಯಲ್ಲಿದ್ದು, ಬೈಂದೂರು, ಕಾರ್ಕಳ ತಾಲೂಕಿಗೂ ವಿಸ್ತರಿಸಿಕೊಂಡಿದೆ.

    ಕಬ್ಬು ಕೃಷಿಗೆ ಉತ್ತೇಜನ ಉದ್ದೇಶ

    ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರಿಗೆ ಕಬ್ಬು ಬೆಳೆಸಲು ಉತ್ತೇಜನ ನೀಡಲು ವಾರಾಹಿ ನೀರಾವರಿ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಬ್ರಹ್ಮಾವರದ ಸಕ್ಕರೆ ಕಾರ್ಖಾನೆಯನ್ನು ಸಿಮೆಂಟ್ ಗೋದಾಮು ಮಾಡಲಾಗಿದೆ. ವಾರಾಹಿ ನೀರು ನಂಬಿ ಯಾವ ರೈತರೂ ಕಬ್ಬು ಬೆಳೆಯಲಿಲ್ಲ ಎಂಬುದು ಅಚ್ಚರಿಯಾದರೂ ಸತ್ಯ. ಆದರೆ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಒಂದು ತುಂಡು ಕಬ್ಬು ಅರೆಯದಿದ್ದರೂ ಅದರ ಆಡಳಿತ ಮಂಡಳಿ ಇದೆ ಎನ್ನುವುದು ಮಾತ್ರ ಅಚ್ಚರಿಯ ಸಂಗತಿ.

    9 ಕೋಟಿ ರೂ. ಮೂಲ ಯೋಜನೆಗೆ ಇದುವರಗೆ 700 ಕೋಟಿ ರೂ. ಖರ್ಚಾಗಿದೆ. ಮೂಲ ಕಾಲುವೆ ಮಾಡದೆ ಉಪಕಾಲುವೆ ಮಾಡಿದ್ದರಿಂದ ನೀರು ಹರಿಯುತ್ತಿಲ್ಲ. ಈಗಾಲೇ ನಾಲ್ಕು ದಶಕ ಕಳೆದಿದೆ. ವರಾಹಿ ನಿರಂತರ ನಡೆಯುವ ಶಾಶ್ವತ ಕಾಮಗಾರಿಯಾಗುತ್ತಿದ್ದು, ಗುತ್ತಿಗೆದಾರರ ಬೆಳೆಸುವ ಯೋಜನೆಯಾಗುತ್ತಿದೆ. ಈ ಯೋಜನೆ ಗಾತ್ರ ಎಷ್ಟೇ ಹೆಚ್ಚಿಕೊಂಡರೂ ಮುಗಿಯುತ್ತದೆ ಎನ್ನುವ ನಂಬಿಕೆ ಇಲ್ಲ.
    -ಸತ್ಯನಾರಾಯಣ ಉಡುಪ
    ಬಲಮುರಿ ಜಪ್ತಿ, ಪ್ರಧಾನ ಕಾರ್ಯದರ್ಶಿ, ಭಾಕಿಸಂ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts