More

    ಬಿತ್ತಿದವರಿಗೆ ಚಿಂತೆಯ ಬಿಕ್ಕಳಿಕೆ

    -ನರೇಂದ್ರ ಎಸ್ ಮರಸಣಿಗೆ ಹೆಬ್ರಿ

    ಜೂನ್ ತಿಂಗಳ ಆರಂಭದಲ್ಲಿ ಮಳೆ ಇಲ್ಲದೆ ಕೃಷಿ ಚಟುವಟಿಕೆಗೆ ತೊಡಕಾಗಿತ್ತು. ವಿಳಂಬವಾದರೂ ರೈತರು ಎದೆಗುಂದದೆ ಭತ್ತ ಬೆಳೆದಿದ್ದರು. ಆದರೆ, ಗದ್ದೆಯ ಎರಡೂ ಬದಿಯಲ್ಲಿರುವ ತೋಡಿನಲ್ಲಿ ಮಳೆ ನೀರು ಉಕ್ಕಿ ಹರಿದು ಕುಡಿಬೈಲ್ ಪರಿಸರದ ಹತ್ತಾರು ಎಕರೆ ಭತ್ತದ ಬೆಳೆ ಹಾನಿಯಾಗಿದೆ.

    ತಾಲೂಕಿನ ಕುಡಿಬೈಲ್, ಮಾತಿಬೆಟ್ಟು, ಪಡುಕುಡೂರು, ಬಲ್ಲಾಡಿ, ವರಂಗದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಾಡಿದ್ದ ಹಡಿಲು ಭೂಮಿಗೂ ನೆರೆ ನೀರು ನುಗ್ಗಿ ಸಮಸ್ಯೆಯಾಗಿದೆ. ಬೆಳೆ ರಕ್ಷಣೆಗೆ ಮಾಡಿದ ಶ್ರಮವೆಲ್ಲವೂ ವ್ಯರ್ಥವಾಗಿದೆ.

    ಇಳುವರಿ ಚಿಂತೆ

    ಈ ವರ್ಷ ಮಳೆ ವಿಳಂಬದಿಂದಾಗಿ ಒಂದು ತಿಂಗಳು ತಡವಾಗಿ ಕೃಷಿ ಚಟುವಟಿಕೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ರೈತರು ನೇಜು ತಯಾರಿಸದೆ ಬಿತ್ತಿದ್ದಾರೆ. ಆದರೆ, ಕೃತಕ ನೆರೆಯಿಂದಾಗಿ ಬಿತ್ತಿದ್ದ ಭತ್ತದ ಬೀಜ ಕೊಚ್ಚಿಕೊಂಡು ಹೋಗಿದೆ. ಹೀಗಾಗಿ ಬಿತ್ತನೆ ಮಾಡಿದ ಬೀಜದಲ್ಲಿ ಅರ್ಧಕ್ಕಿಂತ ಕಡಿಮೆ ಸಸಿಯಾಗಿದೆ. ಇದರಿಂದಾಗಿ ಈ ವರ್ಷ ಅತಿ ಕಡಿಮೆ ಇಳುವರಿ ಬರಲಿದೆ ಎಂಬ ಚಿಂತೆಯೊಂದಿಗೆ ಸೂಕ್ತ ದರವೂ ಸಿಗುತ್ತಿಲ್ಲ ಎಂಬ ಕೊರಗು ರೈತರನ್ನು ಕಾಡುತ್ತಿದೆ.

    ರೈತರ ಶ್ರಮ ವ್ಯರ್ಥ

    ಗದ್ದೆಯ ಕಟ್ಟೆ ಒಡೆದು ತೋಡುಗಳಿಂದ ನೀರು ಬರುತ್ತಿರುವುದನ್ನು ತಡೆಯಲು ಕುಡಿಬೈಲ್ ಪರಿಸರದ ಎಲ್ಲ ರೈತರು ಒಟ್ಟಾಗಿ ಶ್ರಮದಾನ ಮಾಡಿದ್ದರು. ತಾತ್ಕಾಲಿಕ ತಡೆಗೋಡೆ ಹಾಕಿದ್ದರು. ಆದರೆ, ನಿರಂತರ ಮಳೆಯಿಂದಾಗಿ ತಾತ್ಕಾಲಿಕ ತಡೆಗೋಡೆಯೂ ಕೊಚ್ಚಿಕೊಂಡು ಹೋಗಿದೆ. ವಿಪರೀತ ಪ್ರಮಾಣದಲ್ಲಿ ಗದ್ದೆಗೆ ನೀರು ಹರಿದು ಬರುತ್ತಿದೆ. ಒಂದೆಡೆ ಕೃಷಿ ಉಪಕರಣಗಳ ಹಾಗೂ ಟ್ರ್ಯಾಕ್ಟರ್ ಬಾಡಿಗೆ ದರ ಹೆಚ್ಚಳದ ಮಧ್ಯೆಯೂ ರೈತರು ಭತ್ತ ಬಿತ್ತನೆ ಮಾಡಿದ್ದರು. ಇದೀಗ ಮಾಡಿದ ಶ್ರಮವೆಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿದೆ.

    water in agriculural land
    ತೋಡಿನ ಬದು ಒಡೆದು ಮಳೆ ನೀರು ಗದ್ದೆಯಲ್ಲಿ ಹರಿಯುತ್ತಿರುವುದು.

    ತಡೆಗೋಡೆ ನಿರ್ಮಿಸಿ

    ಪ್ರತಿವರ್ಷ ಮಳೆಗಾಲದಲ್ಲಿ ಮೊದಲನೇ ಬೆಳೆಯ ಹತ್ತಾರು ಎಕರೆ ಭತ್ತದ ಗದ್ದೆ ಜಲಾವೃತಗೊಂಡು ನದಿಯಂತೆ ಭಾಸವಾಗುತ್ತದೆ. ಕುಡಿಬೈಲು ಪರಿಸರದಲ್ಲಿ ಗದ್ದೆಯ ಬದಿಯಲ್ಲಿರುವ ಸಣ್ಣ ಸಣ್ಣ ತೋಡುಗಳು ಮಳೆಯಿಂದಾಗಿ ನದಿಯ ರೂಪದಲ್ಲಿ ಹರಿಯುತ್ತವೆ. ಈ ಸಂದರ್ಭದಲ್ಲಿ ರೈತರು ಬಿತ್ತನೆ ಮಾಡಿರುವ ಭತ್ತದ ಬೆಳೆ ಉಳಿಯಬೇಕೆಂದರೆ ಸೂಕ್ತವಾದ ಶಾಶ್ವತ ತಡೆಗೋಡೆ ನಿರ್ಮಿಸಬೇಕಿದೆ. ಸ್ಥಳೀಯಾಡಳಿತ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿ ಎನ್ನುವುದು ಭತ್ತ ಬೆಳೆಗಾರರ ಆಗ್ರಹ.

    ಗದ್ದೆಗೆ ಆವರಿಸುವ ಮರಳು

    ನಿರಂತರ ಮಳೆಯ ಸಂದರ್ಭದಲ್ಲಿ ಪ್ರವಾಹದ ತೀವ್ರತೆಗೆ ಗದ್ದೆಯ ಬದು ಒಡೆದು ಹೋಗುತ್ತದೆ. ವರ್ಷದಲ್ಲಿ ಮೂರ್ನಾಲ್ಕು ಬಾರಿ ಬದು ರಿಪೇರಿ ಹಾಗೂ ಮರು ನಿರ್ಮಾಣ ಮಾಡುವ ಕೆಲಸ ರೈತರಿಗೆ ಇದ್ದೇ ಇರುತ್ತದೆ. ಬದು ಒಡೆದು ಹೋಗುವುದರಿಂದ ನೆರೆಯ ನೀರಿನೊಂದಿಗೆ ಬರುವ ಮರಳು ಗದ್ದೆಯೊಳಗೆ ಆವರಿಸಿಕೊಳ್ಳುತ್ತದೆ. ಇದರಿಂದ ಬೀಜ ಮಣ್ಣಿನ ಅಡಿಗೆ ಸಿಲುಕುತ್ತದೆ ಅಥವಾ ನೀರಿನೊಂದಿಗೆ ಕೊಚ್ಚಿಕೊಂಡು ಹೋಗುತ್ತದೆ. ಇದರ ಜತೆಗೆ ಬಿಡಾಡಿ ದನಗಳ ಕಾಟವೂ ವಿಪರೀತವಾಗಿದೆ.

    ಪ್ರಾಕೃತಿಕ ವಿಕೋಪದಡಿ ಬೆಳೆ ನಷ್ಟವಾಗಿದ್ದಲ್ಲಿ ರೈತರು ತಾಲೂಕು ಕಚೇರಿಗೆ ಬಂದು ಬೆಳೆ ಹಾನಿ ಆದ ಕುರಿತು ಮನವಿ ನೀಡಬಹುದು. ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸುತ್ತೇವೆ. ಕಳೆದ ವರ್ಷ ಬೆಳೆಹಾನಿ ನಷ್ಟದ ಪರಿಹಾರವನ್ನು ರೈತರಿಗೆ ತಲುಪಿಸಿದ್ದೇವೆ. ರೈತರು ಧೃತಿಗೆಡಬೇಕಾಗಿಲ್ಲ.
    -ಪುರಂದರ ಕೆ., ತಹಸೀಲ್ದಾರ್, ಹೆಬ್ರಿ

    ಪ್ರತಿವರ್ಷ ಮೊದಲ ಬೆಳೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಸಮಸ್ಯೆ ಆಗುತ್ತದೆ. ವಿಪರೀತ ಮಳೆಯಿಂದ ನೆರೆ ನೀರಿನೊಂದಿಗೆ ಬೃಹತ್ ಪ್ರಮಾಣದಲ್ಲಿ ಗದ್ದೆಯಲ್ಲಿ ಮರಳು ಶೇಖರಣೆಯಾಗಿದೆ. ಆರಂಭದಲ್ಲಿ ಮಳೆ ಕೈಕೊಟ್ಟಿದ್ದರಿಂದ ನಾವೆಲ್ಲ ಬೀಜ ಬಿತ್ತಿದ್ದು, ಅರ್ಧಕ್ಕಿಂತ ಹೆಚ್ಚು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ನಮ್ಮಂತಹ ಸಣ್ಣ ರೈತರ ಸಮಸ್ಯೆ ಕೇಳುವವರು ಯಾರೂ ಇಲ್ಲ.
    -ಕೆ.ಗಣೇಶ, ಭತ್ತ ಬೆಳೆದ ಕುಡಿಬೈಲ್ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts