More

    ರಸ್ತೆ ಬದಿ ಮಾರಕ ಮರಗಳು

    -ಅನಂತ ನಾಯಕ್ ಮುದ್ದೂರು, ಕೊಕ್ಕರ್ಣೆ

    ಕಳ್ತೂರು ಗ್ರಾಪಂ ವ್ಯಾಪ್ತಿಯ ಬಲ್ಲೆಬೈಲು, ಸಂತೆಕಟ್ಟೆ ಪೇಟೆಯ ಮುಖ್ಯ ರಸ್ತೆಯ ಬದಿಯಲ್ಲಿ ವಿದ್ಯುತ್ ಕಂಬಗಳ ಮೇಲೆ ಮರಗಳು ವಾಲಿ ನಿಂತಿದ್ದು, ಅಪಾಯಕ್ಕೆ ಕಾದಿವೆ. ಕೆಲವು ಕಡೆಗಳಲ್ಲಿ ಮರಗಳು ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿವೆ.

    ಅಪಾಯಕಾರಿ ಮರಗಳ ಕುರಿತು ಸಾರ್ವಜನಿಕರು ಹಲವು ಬಾರಿ ಮೆಸ್ಕಾಂ ಮತ್ತು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿನ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುವುದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ.

    ಇಲಾಖೆಗೆ ಎಚ್ಚರಿಕೆ

    ಮಳೆಗಾಲ ಪ್ರಾರಂಭವಾಗಿದ್ದು, ಆಗಾಗ ಭಾರಿ ಗಾಳಿಯೂ ಬೀಸುತ್ತಲಿದೆ. ಹೀಗಾಗಿ ಅನಾಹುತ ಸಂಭವಿಸುವ ಮೊದಲೇ ಮುಂಜಾಗೃತಾ ಕ್ರಮವಾಗಿ ಮರಗಳ ಗೆಲ್ಲು, ಅಪಾಯಕಾರಿ ಮರ ತೆರವು ಮಾಡಬೇಕೆಂದು ಗ್ರಾಮಸ್ಥರು ಮನವಿ ನೀಡಿದ್ದಾರೆ. ಪ್ರತಿ ಬಾರಿ ನಡೆಯುವ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಈ ಸಮಸ್ಯೆ ಕುರಿತು ಹೇಳುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅರಣ್ಯ ಇಲಾಖೆಯವರೂ ಕೈಕಟ್ಟಿ ಕುಳಿತಿದ್ದಾರೆ. ಬಲ್ಲೆಬೈಲಿನಿಂದ ಸಂತೆಕಟ್ಟೆ ಪೇಟೆ ರಸ್ತೆಯ ಇಕ್ಕೆಲಗಳಲ್ಲಿರುವ ಅಪಾಯಕಾರಿ ಮರ ಹಾಗೂ ಕೊಂಬೆಗಳನ್ನು ಕಡಿಯದಿದ್ದಲ್ಲಿ ಸಾರ್ವಜನಿಕರೇ ತೆರವುಗೊಳಿಸುತ್ತೇವೆ ಎಂದು ಅರಣ್ಯ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.

    ಅಪಾಯಕಾರಿ ಮರ ತೆರವುಗೊಳಿಸುವಲ್ಲಿ ಅರಣ್ಯ ಮತ್ತು ಮೆಸ್ಕಾಂ ಇಲಾಖೆಯವರಲ್ಲಿ ಸಮನ್ವಯತೆ ಇಲ್ಲ. ಇಲ್ಲಿ ಅನಾಹುತವಾದರೆ ಹೆಚ್ಚು ನಷ್ಟವಾಗುವುದು ಮೆಸ್ಕಾಂನವರಿಗೆ. ಮರಗಳು ವಿದ್ಯುತ್ ತಂತಿಗಳ ಮೇಲೆ ವಾಲಿಕೊಂಡಿದ್ದು, ಮಳೆ-ಗಾಳಿಗೆ ಬೀಳುವ ಸಾಧ್ಯತೆ ಇದೆ. ಗ್ರಾಪಂಗೆ ಮನವಿ ನೀಡಿದ್ದರೂ ಯಾವುದೇ ಸ್ಪಂದನೆ ಇಲ್ಲ.
    -ಆದರ್ಶ ಶೆಟ್ಟಿ ಕೆಂಜೂರು, ಸದಸ್ಯ, 38ನೇ ಕಳ್ತೂರು ಗ್ರಾಪಂ

    38ನೇ ಕಳ್ತೂರು ಗ್ರಾಪಂ ವ್ಯಾಪ್ತಿಯ ಸಂತೆಕಟ್ಟೆ ಪೇಟೆ, ಬಲ್ಲೆಬೈಲು ಭಾಗಗಳಲ್ಲಿ ಕಳೆದ ಬಾರಿ ಅಪಾಯಕಾರಿ ಮರಗಳ ತೆರವು ಕಾರ್ಯ ನಡೆದಿದೆ. ಮತ್ತೆ ಅಪಾಯಕಾರಿ ಮರಗಳ ತೆರವಿಗೆ ಮನವಿ ನೀಡಿದರೆ ಶೀಘ್ರದಲ್ಲಿ ತೆರವುಗೊಳಿಸುತ್ತೇವೆ.
    -ಅನಿಲ್‌ಕುಮಾರ, ವಲಯ ಅರಣ್ಯ ಅಧಿಕಾರಿ, ಹೆಬ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts