More

    ಬೇಸಿಗೆ ಬೇಗೆಗೆ ಮಡಕೆ ನೀರ ಬಯಕೆ! ರಾಜಧಾನಿಯಲ್ಲಿ ಗರಿಗೆದರಿದ ವ್ಯಾಪಾರ

    ರಾಮ ಕಿಶನ್​ ಕೆ.ವಿ.
    ಬೆಂಗಳೂರು: ಬಿಸಿಲ ತಾಪ ದಿನೇದಿನೆ ಏರಿಕೆಯಾಗುತ್ತಿದೆ. ತಂಪು ನೀರಿಗಾಗಿ ಮಡಕೆ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸಹಜವಾಗಿಯೇ ಮಡಕೆ ವ್ಯಾಪಾರ ಗರಿಗೆದರಿದೆ. ಆಕರ್ಷಕ ಮಡಕೆಗಳು ಜನರ ಗಮನ ಸೆಳೆಯುತ್ತಿರುವುದು ವ್ಯಾಪಾರಿಗಳ ಮುಖದಲ್ಲಿ ಖುಷಿ ಮೂಡಿಸಿದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ನಡೆಯುವ ಸಂತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಡಕೆ ವ್ಯಾಪಾರಿಗಳು, ಕಳೆದ ಜನವರಿಯಿಂದ ನಗರದ ವಿವಿಧ ಭಾಗಗಳಲ್ಲಿ ಬೀಡು ಬಿಟ್ಟಿದ್ದಾರೆ.

    ಸ್ಟೀಲ್​, ಅಲ್ಯೂಮಿನಿಯಂ, ಪ್ಲಾಸ್ಟಿಕ್​ ಉತ್ಪನ್ನಗಳ ಬಳಕೆ ಹೆಚ್ಚಾಗುತ್ತಿದ್ದಂತೆ ಮಣ್ಣಿನ ಪಾತ್ರೆಗಳಿಗೆ ಬೇಡಿಕೆ ಕಡಿಮೆಯಾಗುತ್ತ ಸಾಗಿತ್ತು. ಸದ್ಯ ಪರಿಸ್ಥಿತಿ ಬದಲಾಗುತ್ತಿದ್ದು, ಆರೋಗ್ಯದ ದೃಷ್ಟಿಯಿಂದ ಜನರು ನೈಸರ್ಗಿಕ ವಸ್ತುಗಳನ್ನು ಅಧಿಕ ಪ್ರಮಾಣದಲ್ಲಿ ಬಳಸಲಾರಂಭಿಸಿದ್ದಾರೆ. ಮಡಕೆ ವ್ಯಾಪಾರ ಚೇತರಿಕೆ ಕಾಣಲು ಇದೂ ಒಂದು ಕಾರಣ. ಬಹುತೇಕರ ಮನೆಯಲ್ಲಿ, ಕಚೇರಿಗಳಲ್ಲಿ ಮಡಕೆ ಠಿಕಾಣಿ ಹೂಡಿದೆ.

    “ಕಳೆದ ಎರಡು ತಿಂಗಳಿನಿಂದ ಮಡಕೆ ವ್ಯಾಪಾರ ಉತ್ತಮವಾಗಿದೆ. ಮಂಡ್ಯದಿಂದ ಬಂದು ಮಾರಾಟ ಮಾಡುತ್ತಿದ್ದೇವೆ. ನಿತ್ಯ ಕನಿಷ್ಠವೆಂದರೂ 5&7 ಮಡಕೆಗಳು ವ್ಯಾಪಾರವಾಗುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಬೇಡಿಕೆ ಹೆಚ್ಚಿದೆ. ವಿವಿಧ ಗಾತ್ರದ ಮಡಕೆಗಳಿದ್ದು, ಮಧ್ಯಮ ಗಾತ್ರದ ಮಡಕೆಗಳನ್ನು ಜನರು ಹೆಚ್ಚು ಖರೀದಿಸುತ್ತಿದ್ದಾರೆ’ ಎನ್ನುತ್ತಾರೆ ಬಸವನಗುಡಿಯಲ್ಲಿನ ವ್ಯಾಪಾರಿ ಶಂಕರ್​.

    ಎರಡು ಲೀಟರ್​ನಿಂದ 15 ಲೀಟರ್​ ಸಾಮರ್ಥ್ಯದವರೆಗಿನ ಮಡಕೆಗಳು ಸಿಗುತ್ತವೆ. ಮಡಕೆಯ ವಿನ್ಯಾಸ ಹಾಗೂ ಗಾತ್ರ ಆಧಾರದ ಮೇಲೆ ದರ ನಿಗದಿಪಡಿಸಿದ್ದೇವೆ. ಸಣ್ಣ ಗಾತ್ರದ ಮಡಕೆಗೆ 250 ರೂ., ಮಧ್ಯಮ ಗಾತ್ರದ ಮಡಕೆಗೆ 300&350, ದೊಡ್ಡ ಗಾತ್ರದ್ದು 450 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ನಲ್ಲಿ ಅಳವಡಿಸಿರುವ ಮಡಕೆ ಹೆಚ್ಚು ಮಾರಾಟವಾಗುತ್ತಿದೆ ಎಂದು ವ್ಯಾಪಾರಿಗಳು ಪ್ರತಿಕ್ರಿಯಿಸಿದ್ದಾರೆ.

    ಆರೋಗ್ಯಕ್ಕೆ ಸಹಕಾರಿ

    ಯಾವುದೇ ಉಪಕರಣಗಳ ಬಳಕೆಯಿಲ್ಲದೆ, ನೈಸರ್ಗಿಕವಾಗಿ ನೀರನ್ನು ತಂಪಾಗಿಸುವ ಗುಣವನ್ನು ಮಡಕೆ ಹೊಂದಿದೆ. ಜತೆಗೆ ಮಣ್ಣಿನಲ್ಲಿರುವ ವಿಶಿಷ್ಟ ಗುಣಗಳು, ದೇಹದಲ್ಲಿರುವ ಕೆಲವು ಬ್ಯಾಕ್ಟೀರಿಯಾಗಳ ಮೇಲೆ ಪ್ರಭಾವ ಬೀರುತ್ತವೆ. ನೈಸರ್ಗಿಕವಾಗಿ ತಣ್ಣಗಿನ ನೀರು ಕುಡಿಯುವುದರಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಇದು ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಗೂ ಸಹಕಾರಿಯಾಗಿದೆ. ಒಟ್ಟಾರೆಯಾಗಿ ಫ್ರಿಡ್ಜ್​ನಲ್ಲಿಟ್ಟ ನೀರಿಗಿಂತ ಮಡಿಕೆ ನೀರು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಸಹಕಾರಿ.

    ಮಣ್ಣಿನ ಬಾಟಲ್​ ಬಳಕೆ ಹೆಚ್ಚಳ

    ಇತ್ತೀಚೆಗೆ ಮಣ್ಣಿನ ಬಾಟಲ್​ ಬಳಕೆ ಯುವಜನರಲ್ಲಿ ಟ್ರೆಂಡ್​ ಆಗುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಆಕರ್ಷಕವಾದ ಮಣ್ಣಿನ ಬಾಟಲ್​ಗಳು ಲಭ್ಯವಿವೆ. ಬೆಲೆ ಸ್ವಲ್ಪ ದುಬಾರಿ ಎನಿಸಿದರೂ ಕೊಂಡುಕೊಳ್ಳುವವರ ಸಂಖ್ಯೆ ಹೆಚ್ಚಿದೆ. 1 ಲೀಟರ್​ ಸಾಮರ್ಥ್ಯದ ಬಾಟಲ್​ಗಳು ಹಾಗೂ ಆಕರ್ಷಕ ಬಣ್ಣಗಳಿಂದ ಚಿತ್ರಿಸಿರುವ ಬಾಟಲ್​ಗಳು ಹೆಚ್ಚು ಮಾರಾಟವಾಗುತ್ತಿವೆ.

    ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದೆ. ೆಬ್ರವರಿಯಿಂದ ವ್ಯಾಪಾರ ಹೆಚ್ಚಿದೆ. ದಿನಕ್ಕೆ 6&8 ಮಡಕೆ ವ್ಯಾಪಾರವಾಗುತ್ತಿವೆ. ಬಹುತೇಕ ಮನೆಗಳಲ್ಲಿ 2&3 ಜನರಿರುವುದರಿಂದ ಸಣ್ಣ ಗಾತ್ರದ ಮಡಕೆ ಹೆಚ್ಚು ಮಾರಾಟವಾಗುತ್ತಿವೆ.
    – ರಾಧಾ, ಮಡಕೆ ವ್ಯಾಪಾರಿ

    ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿಸಿಲಿನ ತೀವ್ರತೆ ಹೆಚ್ಚಿದೆ. ಈ ಪರಿಸ್ಥಿತಿಯಲ್ಲಿ ಫ್ರಿಡ್ಜ್​ನಲ್ಲಿಟ್ಟ ತಂಪು ನೀರು ಕುಡಿಯುವುದರ ಬದಲಾಗಿ ಮಡಕೆ ನೀರು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
    – ಧಮೇರ್ಶ್​ಕುಮಾರ್​, ಗ್ರಾಹಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts