More

    ಕಾಡುವ ಯಮರೂಪಿ ಹೊಂಡ

    -ಹರಿಪ್ರಸಾದ್ ನಂದಳಿಕೆ, ಶಿರ್ವ

    ನಿತ್ಯ ನೂರಾರು ವಾಹನಗಳು ಸಂಚರಿಸುವ ಶಿರ್ವ-ಕಟಪಾಡಿ ಸಾಗುವ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಅಲ್ಲಲ್ಲಿ ಯಮರೂಪಿ ಹೊಂಡಗಳು ನಿರ್ಮಾಣಗೊಂಡಿದೆ. ಮಳೆ ನೀರು ತುಂಬಿರುವ ಗುಂಡಿಗಳ ಆಳ ಅರಿಯದೆ ವಾಹನ ಸವಾರರು ಅಪಘಾತಕ್ಕೊಳಗಾಗುವಂತಾಗಿದೆ.

    ಶಿರ್ವದಿಂದ ಬಂಟಕಲ್ಲು ಮಾರ್ಗದ ಹೆದ್ದಾರಿಯಲ್ಲಿ ಸಂಚರಿಸುವ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗುವ ಸ್ಥಿತಿ ಬಂದಿದೆ. ಈ ರಸ್ತೆಯಲ್ಲಿರುವ ಹೊಂಡ-ಗುಂಡಿಗಳಲ್ಲಿ ಬೈಕ್ ಸವಾರರು ಬಿದ್ದು ಗಾಯಗೊಳ್ಳುವುದು ಇತ್ತೀಚೆಗೆ ಮಾಮೂಲು ಎನ್ನುವಂತಾಗಿದೆ.

    ಕಾಡುವ ಹೊಂಡಗಳು

    ಶಿರ್ವ ಪೇಟೆಯಿಂದ ಸ್ವಲ್ಪವೇ ದೂರದಲ್ಲಿ ಬೃಹತ್ ಗಾತ್ರದ ಹೊಂಡ ಬಿದ್ದು ಹಲವು ತಿಂಗಳು ಕಳೆದರೂ ಸಂಬಂಧಿತರಿಗೆ ಅದನ್ನು ಸರಿಪಡಿಸಲು ಸಮಯ ಇಲ್ಲದಾಗಿದೆ. ಹೀಗಾಗಿ ಸ್ಥಳೀಯರೇ ಸಿಮೆಂಟ್ ಹಾಕಿ ಹೊಂಡ ಮುಚ್ಚುವ ಕೆಲಸ ಮಾಡಿದ್ದಾರೆ. ಶಿರ್ವ ಮಸೀದಿ ಬಳಿಯ ಪೆಜತಕಟ್ಟೆ ಪ್ರದೇಶದಲ್ಲಿ ಡಾಂಬರು ರಸ್ತೆಯನ್ನು ತೆಗೆದು ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದರೂ ಪಕ್ಕದಲ್ಲೇ ಇದೀಗ ಬೃಹತ್ ಹೊಂಡ ನಿರ್ಮಾಣಗೊಂಡಿದೆ. ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜ್ ಮುಂಭಾಗದ ರಸ್ತೆಯೂ ಹದಗೆಟ್ಟಿದೆ.

    ಪ್ರಮುಖ ರಸ್ತೆ

    ಬೆಳ್ಮಣ್ ಶಿರ್ವ ಭಾಗದ ಜನ ಉಡುಪಿಗೆ ಸಾಗಲು ಇದೇ ರಸ್ತೆ ಅವಲಂಬಿಸಿದ್ದಾರೆ. ಉಡುಪಿಯ ರೈಲ್ವೆ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ ಹೀಗೆ ಅನೇಕ ಕೆಲಸ-ಕಾರ್ಯಗಳಿಗಾಗಿ ಸಾಗಲು ಈ ರಸ್ತೆಯಲ್ಲಿ ಹರ ಸಾಹಸ ಪಡುವಂತಾಗಿದೆ. ಒಂದು ಹೊಂಡ ತಪ್ಪಿಸಲು ಹೋಗಿ ಮತ್ತೊಂದು ಹೊಂಡಕ್ಕೆ ಸಿಲುಕುವಂತಾಗಿದೆ. ಹೊಂಡಗಳಿಂದಾಗಿ ಡ್ಯಾಮೇಜ್ ಆದ ಬೈಕ್- ಕಾರುಗಳು ಗ್ಯಾರೇಜ್ ಮಾರ್ಗ ಹಿಡಿಯುವಂತಾಗಿದೆ. ಕೂಡಲೇ ರಸ್ತೆಯ ಹೊಂಡಗಳನ್ನು ಮುಚ್ಚಿಸಿ ಸಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ಗ್ರಾಮಸ್ಥರು.

    ಕೆಸರು ನೀರಿನ ಸಮಸ್ಯೆ

    ಮಳೆಗಾಲದಲ್ಲಿ ನೀರು ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆಗಳಿಲ್ಲದೆ ರಸ್ತೆಯಲ್ಲೇ ಹರಿಯುತ್ತಿದೆ. ಮಳೆ ನೀರು ಚರಂಡಿಗೆ ಹರಿದು ಹೋಗುವಂತೆ ಕೆಲ ದಿನಗಳ ಹಿಂದೆ ಅಲ್ಲಲ್ಲಿ ಲೋಕೋಪಯೋಗಿ ಇಲಾಖೆ ಕಾಮಗಾರಿ ಕೈಗೊಂಡಿದೆ. ಆದರೆ ಹೊಂಡದಲ್ಲಿ ನಿಂತ ಕೆಸರು ನೀರಿನ ಮೇಲೆ ವಾಹನಗಳು ಸಂಚರಿಸುವುದರಿಂದ ದಾರಿಹೋಕರಿಗೆ ಹಾಗೂ ಕಾಲೇಜ್ ಸಮೀಪದಲ್ಲಿ ನಿಂತು ಬಸ್ ಕಾಯುವ ವಿದ್ಯಾರ್ಥಿಗಳ ಮೈಮೇಲೆ ಕೆಸರು ನೀರು ಬೀಳುತ್ತಲಿದೆ.

    ಶಿರ್ವದಿಂದ ಕಟಪಾಡಿ ಸಾಗುವ ರಸ್ತೆಯಲ್ಲಿ ಹೊಂಡಗಳಿಂದಾಗಿ ವಾಹನ ಸಂಚಾರಕ್ಕೆ ತುಂಬ ಕಷ್ಟವಾಗಿದೆ. ಈಗಾಗಲೇ ಸಾಕಷ್ಟು ವಾಹನ ಸವಾರರು ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗುವಂತಾಗಿದೆ. ಕೂಡಲೇ ರಸ್ತೆ ದುರಸ್ತಿ ಮಾಡಬೇಕು.
    -ಮಹೇಶ, ಶಿರ್ವ ಗ್ರಾಮಸ್ಥ

    ಹೊಂಡದಲ್ಲಿ ನೀರು ನಿಲ್ಲುವುದರಿಂದ ಅಲ್ಲಿನ ಗುಂಡಿಯ ಆಳ ತಿಳಿಯುವುದಿಲ್ಲ. ಹೀಗಾಗಿ ಅರಿವಿಲ್ಲದೆ ವಾಹನ ಸವಾರರು ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ಮಳೆಗಾಲದಲ್ಲೂ ಈ ರಸ್ತೆಯಲ್ಲಿ ಇದೇ ಗೋಳು. ಹೊಂಡ ಮುಚ್ಚಿಸಲು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು.
    -ಸಂತೋಷ್ ಶೆಟ್ಟಿ, ವಾಹನ ಸವಾರ

    ಈಗಾಗಲೇ ಅಲ್ಲಲ್ಲಿ ಚರಂಡಿಗೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ. ರಸ್ತೆಯಲ್ಲಿ ನಿರ್ಮಾಣವಾದ ಹೊಂಡ ಮುಚ್ಚುವ ಬಗ್ಗೆ ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
    -ಗಿರೀಶ, ಸಹಾಯಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts