ಜಿಲ್ಲೆ

ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Webdesk - Ravikanth

ಉತ್ತರ ಕನ್ನಡ: ಲಾರಿ ಹಾಗೂ ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಹೆಬ್ಬುಳ ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.

ಲಾರಿ ಮತ್ತು ವ್ಯಾಗನ್ ಆರ್ ಕಾರ್ ನಡುವೆ ಈ ಭೀಕರ ಅಪಘಾತ ಸಂಭವಿಸಿದ್ದು, ಸಂಜನಾ ಸುರೇಶ ರಾಯ್ಕರ್ (7) ಹಾಗೂ ಗುರುಪ್ರಸಾದ ಅಣ್ವೇಕರ (25) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಅಂಕೋಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾರು ಮಹಾರಾಷ್ಟ್ರದಿಂದ ಅಂಕೋಲಾದ ಅವರ್ಸಾ ಕಡೆ ಬರುತ್ತಿದ್ದು, ಲಾರಿ ಅಂಕೋಲಾದಿಂದ ಹುಬ್ಬಳ್ಳಿಗೆ ಕಡೆಗೆ ತೆರಳುತ್ತಿತ್ತು. ಲಾರಿ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೈಗೆತ್ತಿಕೊಂಡಿದ್ದಾರೆ.