ಬೆಳ್ತಂಗಡಿ: ಜೀವನವು ಮಾನಸಿಕ ವ್ಯವಸ್ಥೆಯನ್ನು ಅವಲಂಬಿಸಿದೆ. ಆರೋಗ್ಯವೇ ಎಲ್ಲದಕ್ಕೂ ಮೂಲ ಆಧಾರ ಎಂದು ಮೈಸೂರಿನ ಆಹಾರ ಮತ್ತು ಪೌಷ್ಟಿಕಾಂಶ ತಜ್ಞ ಡಾ.ಖಾದರ್ ವಲ್ಲಿ ಹೇಳಿದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಥೇಶ್ವರ ಕಾಲೇಜಿನಲ್ಲಿ ಮನಃಶಾಸ್ತ್ರ ವಿಭಾಗದ(ಪದವಿ, ಸ್ನಾತಕೋತ್ತರ ಪದವಿ) ವತಿಯಿಂದ ಆಯೋಜಿಸಲಾಗಿದ್ದ 'ಸಿರಿಧಾನ್ಯ ಮತ್ತು ಮಾನಸಿಕ ಆರೋಗ್ಯ' ಕುರಿತ ಒಂದು ದಿನದ ರಾಷ್ಟ್ರೀಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಆಧುನಿಕ ಯುಗದಲ್ಲಿ ಜನರು ಫಾಸ್ಟ್‌ಫುಡ್‌ಗೆ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ದೇಹದಲ್ಲಿ ಹಾರ್ಮೋನ್‌ಗಳ ಅಸಮತೋಲನ ಉಂಟಾಗುತ್ತಿದೆ. ಆಹಾರವನ್ನು ಸರಿಯಾದ ಸಮಯಕ್ಕೆ ಸೇವಿಸುತ್ತಿಲ್ಲ. ಪೌಷ್ಟಿಕ ಆಹಾರ ಸೇವಿಸುವ ಬದಲು ಅಪೌಷ್ಟಿಕ ಆಹಾರಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದಾರೆ. ಇದರಿಂದಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಅನೇಕ ಜನರು ಥೈರಾಯಿಡ್, ಮಧುಮೇಹ, ರಕ್ತದೊತ್ತಡಗಳಿಂದ ಬಳಲುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಜನರು ಸಿರಿಧಾನ್ಯಗಳನ್ನು ದಿನನಿತ್ಯದ ಆಹಾರ ಪದ್ಧತಿಯಲ್ಲಿ ಉಪಯೋಗಿಸಬಹುದು ಎಂದರು.
ಶಿವಮೊಗ್ಗದ ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್ ಡಾ.ಪ್ರೀತಿ ವಿ.ಶಾನಭಾಗ್ ಮಾತನಾಡಿದರು. ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ, ಮಾನವ ದೇಹವೇ ಒಂದು ರಾಸಾಯನಿಕ ವ್ಯವಸ್ಥೆ. ಈ ಎಲ್ಲ ರಾಸಾಯನಿಕಗಳು ನಾವು ಹೇಗೆ ಯೋಚಿಸುತ್ತೇವೆ, ಹೇಗೆ ವರ್ತಿಸುತ್ತೇವೆ, ಹೇಗೆ ಪ್ರತಿಕ್ರಿಯಿಸುತ್ತೇವೆ ಎಂದು ತಿಳಿಸುತ್ತವೆ ಎಂದರು.
ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ, ಕಲಾ ನಿಕಾಯದ ಡೀನ್ ಡಾ.ಶ್ರೀಧರ ಎನ್.ಭಟ್, ವಿಜ್ಞಾನ ನಿಕಾಯದ ಡೀನ್ ಡಾ.ಸವಿತಾ ಕುಮಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ರಾಜ್ಯದ ವಿವಿಧೆಡೆಯ 15 ಕಾಲೇಜುಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು.
ಮನಃಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ.ವಂದನಾ ಜೈನ್ ಸ್ವಾಗತಿಸಿದರು. ಎಂ.ಎಸ್. ಸಿಂಧು ವಂದಿಸಿದರು. ಸೀಮಾ ಜಂಗೀರ್ ಮತ್ತು ಜಾನವಿ ಎಂ. ನಿರೂಪಿಸಿದರು.
ಹಿಂದಿನ ಕಾಲದಲ್ಲಿ ಆರೋಗ್ಯದ ಏರುಪೇರಿಗೆ ಔಷಧಗಳಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಔಷಧಗಳ ಜತೆಗೆ ಕಾಯಿಲೆಗಳೂ ಹೆಚ್ಚಾಗಿವೆ. ಈಗಿನ ಕಾಲದಲ್ಲಿ ತ್ವರಿತ ಪರಿಣಾಮವನ್ನು ಬಯಸುತ್ತೇವೆ. ಒಂದು ಕೆಲಸ ಆಗುವ ಮುನ್ನವೇ ಇನ್ನೊಂದು ಕೆಲಸದ ಏಳಿಗೆಗೆ ಹೆಜ್ಜೆ ಹಾಕಲು ತಯಾರಾಗಿದ್ದೇವೆ. ಅಧ್ಯಯನದ ಪ್ರಕಾರ ಇತ್ತೀಚಿನ ಜನಾಂಗದಲ್ಲಿ ತಾಳ್ಮೆ ಕಡಿಮೆಯಾಗಿ ಎಲ್ಲವನ್ನು ಶೀಘ್ರವಾಗಿ ಮುಗಿಸಬೇಕೆಂಬ ಒತ್ತಡ ಹೆಚ್ಚಾಗಿದೆ. ಡಾ.ಪ್ರೀತಿ ವಿ.ಶಾನಭಾಗ್, ಶಿವಮೊಗ್ಗದ ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್