ಕಾಸರಗೋಡು: ಇನ್‌ಸ್ಟಾಗ್ರಾಂ ಮೂಲಕ ಪರಿಚಯ ಮಾಡಿಕೊಂಡು, ಹನಿಟ್ರಾಪ್‌ನಲ್ಲಿ ಸಿಲುಕಿಸಿ ಯುವಕನಿಂದ ಚಿನ್ನ ಮತ್ತು ಹಣ ಲಪಟಾಯಿಸಿದ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಚೆಮ್ನಾಡ್ ಕೊಂಬನಡ್ಕ ನಿವಾಸಿ ಶ್ರುತಿ ಚಂದ್ರಶೇಖರ್ ಎಂಬಾಕೆಯನ್ನು ಉಡುಪಿಯಿಂದ ಪೊಲೀಸರು ಬಂಧಿಸಿದ್ದಾರೆ.
ಉಡುಪಿಯಲ್ಲಿ ತಲೆಮರೆಸಿಕೊಂಡು ವಾಸಿಸುತ್ತಿದ್ದ ಬಗ್ಗೆ ಮೇಲ್ಪರಂಬ ಠಾಣೆ ಪೊಲೀಸರು ಅಲ್ಲಿನ ಪೊಲೀಸರಿಗೆ ನೀಡಿದ ಮಾಹಿತಿಯನ್ವಯ ಕಾರ್ಯಾಚರಣೆ ನಡೆಸಿ ಈಕೆ ವಾಸಿಸುತ್ತಿದ್ದ ವಸತಿ ಗೃಹದಿಂದ ಸೆರೆಹಿಡಿಯಲಾಗಿದೆ. ಪೊಯಿನಾಚಿಯ 30ರ ಹರೆಯದ ಯುವಕನಿಂದ 1 ಲಕ್ಷ ರೂ.ನಗದು ಹಾಗೂ ಒಂದು ಪವನ್ ಚಿನ್ನದ ಸರ ಎಗರಿಸಿರುವ ಬಗ್ಗೆ ಮೇಲ್ಪರಂಬ ಠಾಣೆಯಲ್ಲಿ ದೂರು ದಾಖಲಾಗಿತ್ತು. ಶ್ರುತಿ ವಿರುದ್ಧ ಕಣ್ಣೂರು ಹಾಗೂ ಕೊಯಿಲಾಂಡಿ ಠಾಣೆಗಳಲ್ಲೂ ಕೇಸುಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.