ಜಿಲ್ಲೆ

ಸವಲತ್ತು ಒದಗಿಸಲು ಪ್ರಾಮಾಣಿಕ ಪ್ರಯತ್ನ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಬೈಂದೂರು

ಬೈಂದೂರು ತಾಲೂಕು ಆಡಳಿತ ಕಚೇರಿ ಸಭಾಂಗಣದಲ್ಲಿ ತಾಲೂಕಿನ ವಿವಿಧ ಕಾರ್ಮಿಕ ಸಂಘಟನೆ ಹಾಗೂ ಕಾರ್ಮಿಕ ಮುಖಂಡರೊಂದಿಗೆ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಸಭೆ ನಡೆಸಿದರು.

ಕಾರ್ಮಿಕರು ಹಲವು ಸಮಸ್ಯೆ ಎದುರಿಸುತ್ತಿದ್ದು, ಅವರ ಹಾಗೂ ಅವರ ಕುಟುಂಬದ ಶ್ರೇಯೋಭಿವೃದ್ಧಿಗೆ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಹಲವು ಯೋಜನೆಗಳಿದ್ದರೂ ಇದರ ಬಗ್ಗೆ ಅರಿವಿರದೆ ಅಥವಾ ಯೋಜನೆ ಸವಲತ್ತು ಪಡೆಯಲು ಸೂಕ್ತ ದಾಖಲೆ ಪಡೆದುಕೊಳ್ಳದೇ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇಂತಹ ಕಾರ್ಮಿಕರನ್ನು ಹುಡುಕಿ ನಿಯಮಿತವಾಗಿ ಅದಾಲತ್ ನಡೆಸಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಶಾಸಕ ಗಂಟಿಹೊಳೆ ಸೂಚಿಸಿದರು.

ಕಾರ್ಮಿಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿಯೂ ನಿಯಮಿತವಾಗಿ ಗಮನ ಸೆಳೆಯಲಾಗುತ್ತಿದ್ದು, ಅವರಿಗೆ ನ್ಯಾಯಯುತ ಪರಿಹಾರ ಒದಗಿಸಿಕೊಡಲು ಹಾಗೂ ಸಿಗಬಹುದಾದ ಎಲ್ಲ ಸವಲತ್ತು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಸಂಚಾಲಕ ಮೋಹನಚಂದ್ರ ಉಪ್ಪುಂದ, ಅಧ್ಯಕ್ಷ ಸಂತೋಷ್ ಭಂಡಾರಿ, ಪದಾಧಿಕಾರಿಗಳು, ಸಿಐಟಿಯು ಕಾರ್ಮಿಕ ಸಂಘಟನೆ ರಾಜೇಶ್ ರೋನಾಲ್ಡ್, ಸುರೇಶ್, ಬೈಂದೂರು ತಾಲೂಕು ಕಾರ್ಮಿಕ ಅಧಿಕಾರಿ, ಸಿಬ್ಬಂದಿ, ಕಾರ್ಮಿಕರು ಉಪಸ್ಥಿತರಿದ್ದರು.

ಸಾಮಗ್ರಿ ವಿತರಣೆ

ಕಾರ್ಮಿಕ ಇಲಾಖೆಯಿಂದ ತಾಲೂಕಿನ 8 ಕಾರ್ಮಿಕರಿಗೆ ಟೈಲ್ಸ್‌ಕಿಟ್, ವೆಲ್ಡರ್‌ಕಿಟ್, 12 ಮಹಿಳೆಯರಿಗೆ ಟೈಲರ್ ಕಾರ್ಡ್ ವಿತರಿಸಲಾಯಿತು.