ಜಿಲ್ಲೆ

ಬೆಂಗಳೂರಲ್ಲಿ ನಡೀತಿದೆ ಹಾಲಿವುಡ್ ಫಿಲ್ಮ್ ಸ್ಟೈಲ್ ಡ್ರಗ್ಸ್ ಮಾಫಿಯಾ!: 3.3 ಕೋಟಿ ಡ್ರಗ್ಸ್ ಜತೆಗೆ ಇಬ್ಬರ ಬಂಧನ

ಬೆಂಗಳೂರು: ಹಾಲಿವುಡ್ ಸಿನಿಮಾ ಸ್ಟೈಲ್​ನ ಡ್ರಗ್ಸ್ ಮಾಫಿಯಾ ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದು, ಅದರ ಒಂದು ಎಳೆ ಈಗ ಬಿಚ್ಚಿಕೊಂಡಿದೆ. ಬರೋಬ್ಬರಿ 3.3 ಕೋಟಿ ರೂಪಾಯಿ ಮೌಲ್ಯದ ಬ್ರೌನ್​ ಶುಗರ್, ಅಪೀಮು, ಎಲ್​.ಎಸ್.ಡಿ ಸ್ಟ್ರಿಪ್ಸ್, ಎಂಡಿಎಂಎ ಗಳನ್ನು ವಶಪಡಿಕೊಂಡಿರುವ ಸಿಟಿ ಮಾರ್ಕೆಟ್ ಪೊಲೀಸರು, ಇಬ್ಬರು ಬಂಧಿಸಿದ್ದಾರೆ.

ಬಂಧಿತರನ್ನು ರಾಜಾರಾಮ್ ಮತ್ತು ಸುನೀಲ್ ಕುಮಾರ್ ಎಂದು ಗುರುತಿಸಲಾಗಿದೆ. ಅವರಿಂದ 1.280 ಕಿಲೋ ಬ್ರೌನ್​ ಶುಗರ್, 475 ಗ್ರಾಂ ಅಪೀಮು, 25 ಎಲ್​ಎಸ್​ಡಿ ಸ್ಟ್ರಿಪ್ಸ್, 32 ಗ್ರಾಂ ಎಂಡಿಎಂಎ ಫಾಯಿಲ್ ರೋಲ್​ಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜಾರಾಮ್ ಬೆಂಗಳೂರಿನ ಮಾಗಡಿ ನಿವಾಸಿಯಾದರೆ, ಸುನೀಲ್ ಕುಮಾರ್ ಕುಂಬಳಗೋಡು ನಿವಾಸಿ. ಇಬ್ಬರ ಮನೆ ಮೇಲೆ ದಾಳಿ ನಡೆಸಿದಾಗ ಒಟ್ಟು 3.3 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಸಿಕ್ಕಿದೆ.

ಮೆಟಲ್ ರೇಲಿಂಗ್​ನಲ್ಲಿ ಇವುಗಳನ್ನು ತುಂಬಿಸಿ ರಾಜಸ್ಥಾನದಿಂದ ಬೆಂಗಳೂರಿಗೆ ಸಾಗಿಸ್ತಾ ಇದ್ರು. ಮೆಟಲ್ ರೇಲಿಂಗ್ ಲೋಡ್ ಬರುವಾಗ ಅದರಲ್ಲಿ ಒಂದೆರಡು ಪೀಸ್​ಗಳನ್ನು ಮಾರ್ಕ್​ ಮಾಡಿ ಕಳುಹಿಸಲಾಗುತ್ತಿತ್ತು. ಅದರಲ್ಲಿ ಡ್ರಗ್ಸ್ ಇರುವುದು ಖಚಿತವಾಗುತ್ತಿತ್ತು. ಹಾಲಿವುಡ್ ಸಿನಿಮಾಗಳಲ್ಲಿ ತೋರಿಸುವ ರೀತಿಯಲ್ಲೇ ಟೊಳ್ಳು ರೇಲಿಂಗ್ ಒಳಭಾಗದಲ್ಲಿ ಡ್ರಗ್ಸ್ ತುಂಬಿ ಡಿಟೆಕ್ಟರ್​ಗಳ ಕಣ್ತಪ್ಪಿಸಿ ಇವುಗಳನ್ನು ಸಾಗಿಸಲಾಗುತ್ತಿತ್ತು. ಇದೇ ರೀತಿ ಲಗೇಜ್ ಬ್ಯಾಗ್​ನ ಕೆಳಭಾಗದ ಸ್ಟಿಚ್ ಹರಿದು ಅಲ್ಲಿ ಡ್ರಗ್ಸ್ ತುಂಬಿ ಮತ್ತೆ ಹೊಲಿದು ಆ ಮೂಲಕವೂ ಡ್ರಗ್ಸ್ ಸಾಗಿಸುತ್ತಿರುವುದನ್ನು ಆರೋಪಿಗಳು ಖಚಿತಪಡಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. (ದಿಗ್ವಿಜಯ ನ್ಯೂಸ್)