ಜಿಲ್ಲೆ

ರಾಜ್ಯದಲ್ಲಿ ಒಂದರ ಹಿಂದೊಂದರಂತೆ ಹೃದಯಾಘಾತ!; ಹಾಕಿ ಆಡ್ತ ಆಡ್ತ ಇಹಲೋಕ ತ್ಯಜಿಸಿದ ತರುಣ..

Webdesk - Ravikanth

ಕೊಡಗು: ರಾಜ್ಯದಲ್ಲಿ ಒಂದಾದ ಮೇಲೊಂದರಂತೆ ಹೃದಯಾಘಾತದ ಸುದ್ದಿ ಕೇಳಿ ಬರುತ್ತಿದ್ದು ಇದೀಗ ತರುಣನೊಬ್ಬ ಮರಣಕ್ಕೀಡಾದ ಪ್ರಕರಣವೊಂದು ವರದಿಯಾಗಿದೆ. ಕೊಡಗಿನ ಮೂರ್ನಾಡು ಎಂಬಲ್ಲಿ ಈ ಘಟನೆ ನಡೆದಿದೆ.

ಇದಕ್ಕೂ ಮುನ್ನ ಕೆಎಸ್​ಆರ್​ಟಿಸಿ ಬಸ್​ ಕಂಡಕ್ಟರ್​ ವಿಜಯ್​ (43) ಎಂಬವರು ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟ ಘಟನೆ ಮೂಡಿಗೆರೆಯಲ್ಲಿ ಸಂಭವಿಸಿದೆ. ಶನಿವಾರ ಬೆಳಗ್ಗೆ 6ಕ್ಕೆ ಚಿಕ್ಕಮಗಳೂರಿನಿಂದ ಉಡುಪಿಗೆ ಹೊರಟ ಕೆಎಸ್​ಆರ್​ಟಿಸಿ ಬಸ್​ನಲ್ಲಿದ್ದ ಇವರಿಗೆ ಮಾರ್ಗಮಧ್ಯೆ ಚಾರ್ಮಾಡಿ ಘಾಟ್​ನ ಮಲಯ ಮಾರುತ ಬಳಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಮೂಡಿಗೆರೆ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕಲಿಲ್ಲ.

ಇನ್ನೊಂದೆಡೆ ತುಮಕೂರಿನ ಶಿರಾದಲ್ಲಿ ನಗರಸಭೆ ಚುನಾವಣೆಯ 21ನೇ ವಾರ್ಡ್​ನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಚಾಂದ್ ಪಾಷಾ ಹೃದಯಾಘಾತದಿಂದ ಶುಕ್ರವಾರ ತಡರಾತ್ರಿ‌ ಕೊನೆಯುಸಿರೆಳೆದ ವಿಷಯ ಇಂದು ಬೆಳಗ್ಗೆ ಬೆಳಕಿಗೆ ಬಂದಿತ್ತು. ಡಿ. 27ರಂದು ನಡೆಯಬೇಕಿದ್ದ ಈ ವಾರ್ಡ್​ನ ಚುನಾವಣೆಯನ್ನು ಇವರ ಸಾವಿನ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಇತರ ವಾರ್ಡ್​ಗಳ ಮತದಾನ ಪ್ರಕ್ರಿಯೆ ಡಿ.27ಕ್ಕೆ ನಡೆಯಲಿದೆ.

ಮತ್ತೊಂದೆಡೆ ಮಂಡ್ಯ ಜಿಲ್ಲೆಯ ಎಲೆಚಾಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ರಾಜೇಶ್ ​(47) ಗುರುವಾರ ತರಗತಿಯಲ್ಲಿ ಪಾಠ ಮಾಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಅಂದು ರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಈ ಎಲ್ಲ ಹೃದಯಾಘಾತ ಸುದ್ದಿಗಳ ಬೆನ್ನಿಗೆ ಕೊಡಗಿನ ಯುವಕನ ಸಾವಿನ ಸುದ್ದಿ ಕೇಳಿ ಬಂದಿದೆ. ಮೂರ್ನಾಡಿನಲ್ಲಿ ನಡೆಯುತ್ತಿರುವ ಚೌರೀರ ಹಾಕಿ ಟೂರ್ನಿಯಲ್ಲಿ ಆಡುತ್ತಿದ್ದ ಇವರು ಆಟದ ಸಂದರ್ಭದಲ್ಲೇ ಹೃದಯಾಘಾತಕ್ಕೀಡಾಗಿದ್ದಾರೆ. ಇವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಇವರು ಬಲಂಬೇರಿ ಗ್ರಾಮದ ದೇವಯ್ಯ ಎಂಬವರ ಪುತ್ರ.