| ಹರೀಶ್ ಬೇಲೂರು ಬೆಂಗಳೂರು
ರಾಜಧಾನಿಯಲ್ಲಿ ಹೋರ್ಡಿಂಗ್ ಮಾಫಿಯಾ ಗಟ್ಟಿಯಾಗಿ ನೆಲೆಯೂರಿದೆ. ಸರ್ಕಾರಗಳು ಈ ಮಾಫಿಯಾದ ಬೇರುಗಳನ್ನು ಬುಡಸಮೇತ ಕಿತ್ತೊಗೆಯಲು ವಿಫಲವಾಗಿವೆ. ಬಿಬಿಎಂಪಿ ಅಧಿಕಾರಿಗಳಂತೂ ರೆಡ್ ಕಾರ್ಪೆಟ್ ಹಾಸಿರುವುದು ಬಟಾಬಯಲಾಗಿದೆ. ಹೋರ್ಡಿಂಗ್ನಿಂದ ಬಿಬಿಎಂಪಿಗೆ ಅಷ್ಟೇನೂ ಲಾಭವಿಲ್ಲದಿದ್ದರೂ ಖಾಸಗಿ ಮಾಫಿಯಾದವರಿಗೆ ಮಣಿದಿರುವ ಸರ್ಕಾರ, ‘ಬಿಬಿಎಂಪಿ ಜಾಹೀರಾತು ನಿಯಮಗಳು-2019’ ಜಾರಿಗೆ ತರಲು ಈಗಾಗಲೇ ಅಧಿಸೂಚನೆ ಹೊರಡಿಸಿರುವುದು ಅನುಮಾನ ಮೂಡಿಸಿದೆ.
ನಗರದ ಅಂದಗೆಡಿಸುತ್ತಿರುವ ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್ನಿಂದ ಮಾಫಿಯಾದವರು ಪ್ರತಿವರ್ಷ 1,000- 1,500 ಕೋಟಿ ರೂ. ಆದಾಯ ಗಳಿಸುತ್ತಾರೆ. ಆದರೆ, ಬಿಬಿಎಂಪಿಗೆ ಅಂದಾಜು 30-40 ಕೋಟಿ ರೂ. ಪಾವತಿಸಿ ನೂರಾರು ಕೋಟಿ ರೂ. ತೆರಿಗೆ ವಂಚಿಸುತ್ತಿದ್ದಾರೆ. ಜತೆಗೆ, ಹೋರ್ಡಿಂಗ್ ಸಂಬಂಧ ಯಾವ್ಯಾವ ವರ್ಷದಲ್ಲಿ ಎಷ್ಟು ತೆರಿಗೆ ಪಾವತಿಸಲಾಗಿದೆ ಎಂಬುದರ ಬಗ್ಗೆ ಬಿಬಿಎಂಪಿಯಲ್ಲಿ ನಿಖರ ಮಾಹಿತಿಯೇ ಇಲ್ಲ ಎಂದು ಮಾಜಿ ಮೇಯರ್ವೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಆದೇಶ ಹಿಂದೆ ಹೋರ್ಡಿಂಗ್ ಮಾಫಿಯಾ ಲಾಬಿ ಮಾಡಿರುವ ಬಗ್ಗೆ ಗಂಭೀರ ಆರೋಪಗಳಿವೆ. ನಗರದಲ್ಲಿ ಹೋರ್ಡಿಂಗ್ ತೆರವುಗೊಳಿಸಲು 2018ರ ಫೆಬ್ರವರಿಯಲ್ಲಿ ಹೈಕೋರ್ಟ್ ಬಿಬಿಎಂಪಿಗೆ ನಿರ್ದೇಶಿತ್ತು. ಅದರಂತೆ, ಹೋರ್ಡಿಂಗ್ ಹಾಕುವುದಕ್ಕೆ ನಿರ್ಬಂಧ ಹೇರಲಾಗಿದೆ. ಜಾಹೀರಾತು ಫಲಕ ಹಾಕುವುದಕ್ಕೆ ವಿರುದ್ಧವಾಗಿ ಬಿಬಿಎಂಪಿ ಮಾಸಿಕ ಸಾಮಾನ್ಯ ಸಭೆಯಲ್ಲಿಯೂ ಎಲ್ಲ ಸದಸ್ಯರು ಮತ ಚಲಾಯಿಸಿದ್ದಾರೆ. ಆದರೆ, ಬಿಬಿಎಂಪಿಯಲ್ಲಿ ಸ್ಥಳೀಯ ಸರ್ಕಾರ ಅಸ್ತಿತ್ವದಲ್ಲಿ ಇಲ್ಲದ ವೇಳೆ ನಗರದಲ್ಲಿ ಮತ್ತೆ ಹೋರ್ಡಿಂಗ್ ಹಾಕಲು ಸರ್ಕಾರ ಅವಕಾಶ ನೀಡಿರುವ ಬಗ್ಗೆ ನಗರದ ಯೋಜನಾ ತಜ್ಞರು, ಕೆಲ ಮಾಜಿ ಬಿಬಿಎಂಪಿ ಸದಸ್ಯರು, ಸಾಮಾಜಿಕ ಕಾರ್ಯಕರ್ತರು ಹಾಗೂ ಜನರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಬೇನಾಮಿ ಹೆಸರಲ್ಲಿ ಪರವಾನಗಿ: ಬಿಬಿಎಂಪಿಯಲ್ಲಿ ಹೋರ್ಡಿಂಗ್ ಇನ್ಸ್ಪೆಕ್ಟರ್, ಎಆರ್ಒ, ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಜಾಹೀರಾತು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಅಧಿಕಾರಿಗಳು ಬೇರೆ ಬೇರೆ ಹೆಸರಿನಲ್ಲಿ ಪರವಾನಗಿ ಪಡೆದಿದ್ದಾರೆ. ಶಾಸಕರು, ಮಾಜಿ ಕಾಪೋರೇಟರ್ ಬೆಂಬಲಿಗರು ಹಾಗೂ ಖಾಸಗಿಯವರು ಹೆಚ್ಚಾಗಿ ಪರವಾನಗಿ ಪಡೆದಿರುವುದು ಬೆಳಕಿಗೆ ಬಂದಿದೆ. ಪರವಾನಗಿ ಪಡೆದಿರುವವರು ಲೈಸೆನ್ಸ್ ಅನ್ನು ಮರುನವೀಕರಣ ಮಾಡಿಸಿಕೊಂಡಿಲ್ಲ. ಒಂದಕ್ಕೆ ಪರವಾನಗಿ ಪಡೆದು ಹತ್ತಾರು ಕಡೆಗಳಲ್ಲಿ ಹೋರ್ಡಿಂಗ್ ಹಾಕಿ ಭರ್ಜರಿ ಆದಾಯ ಗಳಿಸುವ ಮಾಫಿಯಾದವರು ಬಿಬಿಎಂಪಿಗೆ ಸರಿಯಾಗಿ ಶುಲ್ಕ ಪಾವತಿಸಿಲ್ಲ. ಮೂರು ತಿಂಗಳ ಶುಲ್ಕದ ಬದಲಿಗೆ ಕೇವಲ 1 ತಿಂಗಳು ಕಟ್ಟಿ ಉಳಿದ 2 ತಿಂಗಳ ಬಿಲ್ ಅನ್ನು ಅಧಿಕಾರಿಗಳ ಜತೆ ಶಾಮೀಲಾಗಿ ಗುಳುಂ ಮಾಡಿದ್ದಾರೆ. 30-40 ಅಡಿ ಹೋರ್ಡಿಂಗ್ ಹಾಕಿದ್ದರೆ, 20-30 ಅಡಿ ಹಾಕಿದ್ದೇವೆ ಎಂದು ಬಿಲ್ ಹಾಕುವ ಅಧಿಕಾರಿಗೆ ತಪು್ಪ ಮಾಹಿತಿ ನೀಡುತ್ತಾರೆ. ಇದರಲ್ಲಿಯೂ ಕೋಟ್ಯಂತರ ರೂ. ವಂಚಿಸಲಾಗಿದೆ. ವಲಯವಾರು ಪ್ರತ್ಯೇಕ ದರವಿದೆ. ತರಹೇವಾರಿ ಜಾಹೀರಾತು ಆಧಾರದ ಮೇಲೆ ಬಿಲ್ ಕಟ್ಟಬೇಕಾಗುತ್ತದೆ ಹಾಗೂ ವಾಣಿಜ್ಯ ಜಾಹೀರಾತಿಗೆ ಹೆಚ್ಚಿನ ದರವಿರುತ್ತದೆ. ಆದರೆ, ನಿಯಮದಂತೆ ಯಾರೂ ಸರಿಯಾಗಿ ಶುಲ್ಕ ಪಾವತಿಸುವುದಿಲ್ಲ.
ಕೋಟ್ಯಧಿಪತಿ ಅಧಿಕಾರಿಗಳು!: ಕೆಲ ಅಧಿಕಾರಿಗಳು ಹೋರ್ಡಿಂಗ್ನಿಂದಲೇ ಕೋಟ್ಯಂತರ ರೂ. ಆದಾಯ ಗಳಿಸಿದ್ದಾರೆ. ಬಿಬಿಎಂಪಿಗೆ ತೆರಿಗೆ ಸಂಗ್ರಹಿಸಲು ಕಠಿಣ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳೇ ಅಕ್ರಮವಾಗಿ ಲಕ್ಷಾಂತರ ರೂ. ಲಾಭ ಮಾಡಿಕೊಳ್ಳುತ್ತಾರೆ. ಆದ್ದರಿಂದ, ಇಂತಹ ವರನ್ನು ಕಟ್ಟಿಹಾಕಲು ಈವರೆಗೆ ಬಿಬಿಎಂಪಿಗೆ ಸಾಧ್ಯವಾಗಿಲ್ಲ. ಮಾಫಿಯಾ ಜತೆ ಕೈಜೋಡಿಸಿ ಅಧಿಕಾರಿಗಳೇ ಬಿಬಿಎಂಪಿಗೆ ತಪ್ಪು ಮಾಹಿತಿ ನೀಡಿ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ.
ಹೋರ್ಡಿಂಗ್ನಿಂದ ಬಿಬಿಎಂಪಿಗೆ ನಿರೀಕ್ಷಿತ ಆದಾಯ ಬರುವುದಿಲ್ಲ. ನಾನು ಮೇಯರ್ ಆಗಿದ್ದಾಗ ಎಷ್ಟು ಆದಾಯ ನಿಗದಿಪಡಿಸಲಾಗಿದೆ ಎಂಬುದರ ಬಗ್ಗೆ ಪರಿಶೀಲಿಸಿದ್ದಾಗ ಶೇ.30ಕ್ಕಿಂತ ಕಡಿಮೆ ಆದಾಯ ಬಂದಿತ್ತು. ಜಾಹೀರಾತು ಏಜೆನ್ಸಿಯವರಿಗೆ ಮಾತ್ರ ಇದರಿಂದ ಲಾಭವಿದೆ. ಸರ್ಕಾರ ‘ಬಿಬಿಎಂಪಿ ಜಾಹೀರಾತು ನಿಯಮಗಳು-2019’ ಜಾರಿ ಸಂಬಂಧ ಅಧಿಸೂಚನೆ ಹೊರಡಿಸಿರುವುದು ಸರಿಯಲ್ಲ. | ಗಂಗಾಂಬಿಕೆ ಮಲ್ಲಿಕಾರ್ಜುನ್ ಮಾಜಿ ಮೇಯರ್ ಹೋರ್ಡಿಂಗ್ ಸಂಬಂಧ ಯಾರ್ಯಾರು ಎಷ್ಟು ಶುಲ್ಕ ಪಾವತಿಸ ಬೇಕೆಂದು ಪರಿಶೀಲಿಸಿ ವರದಿ ನೀಡುವಂತೆ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ವಿಶೇಷ ತಂಡ ರಚಿಸ ಲಾಗಿತ್ತು. ಸಾಕಷ್ಟು ಪರಿಶ್ರಮವಹಿಸಿ 48 ಕೋಟಿ ರೂ. ಸಂಗ್ರಹ ಮಾಡಲಾಗಿತ್ತು. ಹೋರ್ಡಿಂಗ್ ಮಾಫಿಯಾ ದವರು ಬಿಲ್ ಕಟ್ಟುವುದು ಒಂದೇ ಬೋರ್ಡ್ಗೆ ಮಾತ್ರ. ಆದರೆ ಅದೇ ನಂಬರ್ ಹಾಕಿಕೊಂಡು ಅವರವರ ಕ್ಷೇತ್ರಗಳಲ್ಲಿ ಹೋರ್ಡಿಂಗ್ ಹಾಕುತ್ತಾರೆ. ನಾನು ಮೇಯರ್ ಆಗಿದ್ದಾಗ ಇದರ ವಿರುದ್ಧ ಸಾಕಷ್ಟು ಕ್ರಮಗಳನ್ನು ಜರುಗಿಸಿದ್ದರೂ ಪೂರ್ತಿ ಮಟ್ಟ ಹಾಕಲು ಸಾಧ್ಯವಾಗಲಿಲ್ಲ. | ಜಿ. ಪದ್ಮಾವತಿ ಮಾಜಿ ಮೇಯರ್