ಜಿಲ್ಲೆ

ಶ್ರೀಧರ ಎಂಬ ಯುವಕ ಮೊಹ್ಮದ್ ಸಲ್ಮಾನ್ ಆದ ಕಥೆ-ವ್ಯಥೆ; ಬಲವಂತದ ಖತ್ನಾ, ಮತಾಂತರ..

ಹುಬ್ಬಳ್ಳಿ: ಬಲವಂತದ ಖತ್ನಾ, ಮಸೀದಿಯಿಂದ ಮಸೀದಿಗೆ ಅಲೆದಾಟ, ಪ್ರತಿ ವರ್ಷ ಮೂವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಕ್ಕೆ ಒಪ್ಪಿಸಬೇಕೆಂಬ ಒತ್ತಡ, ದನದ ಮಾಂಸ ತಿನ್ನಲು ಒಪ್ಪದಿದ್ದಾಗ ಬಲಗೈಗೆ ಚಾಕುವಿನಿಂದ ಇರಿತ...

ಮಂಡ್ಯ ಜಿಲ್ಲೆಯ ಮದ್ದೂರಿನ ಯಡವನಹಳ್ಳಿಯ ಶ್ರೀಧರ ಗಂಗಾಧರ (26) ಈ ತರಹದ ಸಂದಿಗ್ಧತೆ, ಸಂಕಷ್ಟಗಳನ್ನು ವರ್ಷದಿಂದ ಎದುರಿಸಿರುವ ಕರುಳು ಹಿಂಡುವ ಕತೆ ಇದು. ಹುಬ್ಬಳ್ಳಿಯ ಎಪಿಎಂಸಿ ಠಾಣೆಯಲ್ಲಿ ಶ್ರೀಧರ ದೂರು ನೀಡಿದಾಗ ಈ ಬಲವಂತದ ಮತಾಂತರ ಪ್ರಕರಣದ ಮಾಹಿತಿ ಬೆಳಕಿಗೆ ಬಂದಿದೆ!

ಬಲವಂತದ ಮತಾಂತರದ ಕಿರುಕುಳಕ್ಕೆ ಬೇಸತ್ತು ಶ್ರೀಧರ ತನ್ನ ಹೆಸರನ್ನು ಮೊಹ್ಮದ್ ಸಲ್ಮಾನ್ ಎಂದು ಬದಲಿಸಿಕೊಂಡೂ ಆಗಿದೆ. ಶ್ರೀಧರ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಮಂಡ್ಯ ಜಿಲ್ಲೆಯ ಕೊಪ್ಪದ ಅತ್ತಾವರ ರೆಹಮಾನ್ ಎಂಬಾತ ಬೆಂಗಳೂರಿನ ಬನಶಂಕರಿ ಖಬರಸ್ತಾನದಲ್ಲಿ ಧಾರವಾಡದ ಆಜಿಸಾಬ್‌ಗೆ ಶ್ರೀಧರನನ್ನು ಪರಿಚಯಿಸಿದ್ದಾನೆ. ನಂತರ ಮತಾಂತರ ಪ್ರಕ್ರಿಯೆಗಳು ಆರಂಭಗೊಂಡಿವು.

ಅಲ್ಲದೆ ಹಿಂದು ಧರ್ಮದಲ್ಲಿನ ಶಿವ, ವಿಷ್ಣು, ಗಣೇಶ ದೇವರಿಗೆ ಅವಮಾನ, ತಿರಸ್ಕಾರದ ಪಾಠಗಳನ್ನು ಶ್ರೀಧರನಿಗೆ ಹೇಳಲಾಗಿದೆ. ಇಸ್ಲಾಂ ಧರ್ಮದ ಬಗ್ಗೆ ವಾರಗಟ್ಟಲೆ ಬೋಧನೆ ಮಾಡಿ ಖತ್ನಾ ಸಹ ಮಾಡಿಸಲಾಗಿದೆ.

ತರಬೇತಿ ನೀಡಲು ಮುಖ್ಯಸ್ಥನಿದ್ದ..

ಇಸ್ಲಾಂ ಬಗ್ಗೆ ಶ್ರೀಧರಗೆ ತರಬೇತಿ ನೀಡಲು ಮುಖ್ಯಸ್ಥರೊಬ್ಬರನ್ನು ನೇಮಕ ಮಾಡಲಾಗಿತ್ತು. ಅಲ್ಲದೇ, ಅವರ ನೇತೃತ್ವದಲ್ಲಿ 11 ಜನರ ತಂಡ ರಚಿಸಲಾಗಿತ್ತು. ಬೆಂಗಳೂರಿನ ರಾಜರಾಜೇಶ್ವರಿನಗರದ ಬ್ಯಾಂಕ್‌ನಲ್ಲಿ ಮೊಹ್ಮದ್ ಸಲ್ಮಾನ್ ಹೆಸರಿನಲ್ಲಿ ಶ್ರೀಧರನಿಗೆ ಬ್ಯಾಂಕ್ ಖಾತೆ ಮಾಡಿಸಿಕೊಟ್ಟು, ಹಣವನ್ನೂ ಜಮಾ ಮಾಡಲಾಗಿದೆ.

ಶ್ರೀಧರನನ್ನು ಬನಶಂಕರಿ ಮಸೀದಿಗೆ ಕರೆತಂದು ದನದ ಮಾಂಸ ತಿನ್ನಲು ಒತ್ತಾಯಿಸಲಾಗಿದೆ. ನಿರಾಕರಿಸಿದಾಗ ಬಲಗೈಗೆ ಚಾಕುವಿನಿಂದ ತಿವಿಯಲಾಗಿದೆ. ಜೆ.ಪಿ.ನಗರ, ಶಿವಾಜಿನಗರ, ತಿರುಪತಿಯಲ್ಲಿ ಇಸ್ಲಾಂ ಧರ್ಮದ ಬಗ್ಗೆ ತರಬೇತಿ ನೀಡಲಾಗಿದೆ. ರಬ್ಬಾನಿ, ನೂರಾನಿ, ಮುಬಾರಕ್ ಮಸೀದಿಯಲ್ಲಿ ಕುರಾನ್ ಓದಿಸಿ ಪ್ರಾರ್ಥನೆ ಮಾಡಿಸಿದ್ದಲ್ಲದೆ, ಆಂಧ್ರಪ್ರದೇಶದ ಪುತ್ತೂರು ಹತ್ತಿರದ ಸಿಬಿಎನ್ ಕಂಟ್ರಿಯಲ್ಲೂ ತರಬೇತಿ ನೀಡಿ, ಬೆಂಗಳೂರಿಗೆ ಕರೆ ತರಲಾಗಿದೆ. ನಂತರ ಸ್ವತಂತ್ರವಾಗಿ ಹಿಂದುಗಳನ್ನು ಮತಾಂತರ ಮಾಡಲು ಬಿಡಲಾಗಿದೆ. ಅಲ್ಲದೆ, ನಿನ್ನ ಮೇಲೆ ಕಣ್ಣಿಟ್ಟಿರುತ್ತೇವೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಎಲ್ಲ ವಿವರಗಳನ್ನು ಶ್ರೀಧರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸಿದ್ದಾರೆ.

ಭಯೋತ್ಪಾದಕನಂತೆ ಬಿಂಬಿಸುವ ಎಚ್ಚರಿಕೆ!

ಶ್ರೀಧರನ ಕೈಗೆ ಬಂದೂಕು, ಪಿಸ್ತೂಲ್ ಕೊಟ್ಟು ಫೋಟೋಗಳಿಗೆ ಪೋಸ್ ಕೊಡಿಸಲಾಗಿದೆ. ಆತನ ಹೆಸರಿನ ಅಕೌಂಟ್‌ಗೆ ಹಣ ಜಮಾ ಮಾಡಲಾಗಿದೆ. ಈ ಎಲ್ಲ ಸಂಗತಿಗಳನ್ನು ಮುಂದಿಟ್ಟುಕೊಂಡು ಶ್ರೀಧರಗೆ ಟಾರ್ಚರ್ ಕೊಟ್ಟು, ಮತಾಂತರ ಮಾಡಿರುವುದರ ಕುರಿತು ಲಿಖಿತವಾಗಿ ಬರೆಯಿಸಿಕೊಳ್ಳಲಾಗಿದೆ. ಪ್ರತಿ ವರ್ಷ ಮೂವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಬೇಕು. ಈ ಕುರಿತು ಎಲ್ಲಿಯೂ ಬಹಿರಂಗಪಡಿಸಬಾರದು. ಬಾಯಿ ಬಿಟ್ಟರೆ ಭಯೋತ್ಪಾದಕನೆಂಬಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಲಾಗುತ್ತದೆ ಎಂದು ಬೆದರಿಕೆ ಹಾಕಲಾಗಿದೆ ಎಂದು ಒಟ್ಟು 12 ಜನರ ವಿರುದ್ಧ, ಶ್ರೀಧರ ಹುಬ್ಬಳ್ಳಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬೆಳಕಿಗೆ ಬಂದಿದ್ದು ಹೀಗೆ...

ಫೇಸ್‌ಬುಕ್‌ನಲ್ಲಿ ಪರಿಚಯವಾದ ಹುಡುಗಿ ಭೇಟಿಗೆ ಶ್ರೀಧರ ಹುಬ್ಬಳ್ಳಿಯ ಭೈರಿದೇವರಕೊಪ್ಪಕ್ಕೆ ಬಂದಿದ್ದರು. ಸೆ. 21ರಂದು ರಾತ್ರಿ ವೇಳೆ ಹುಡುಗಿ ಭೇಟಿಗಾಗಿ ಅಡ್ಡಾಡುತ್ತಿದ್ದಾಗ ಯಾರೋ 4-5 ಜನರು ತನ್ನ ಮೇಲೆ ಹಲ್ಲೆ ಮಾಡಿರುವುದಾಗಿ ಶ್ರೀಧರ ಸೆ. 23ರಂದು ನೀಡಿದ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ದೂರು ನೀಡುವಾಗ ತನ್ನನ್ನು ಹೇಗೆ ಮತಾಂತರಗೊಳಿಸಿ, ಹೀನಾಯವಾಗಿ ನಡೆಸಿಕೊಂಡು ಬೆದರಿಕೆ ಹಾಕಿದ್ದಾರೆ ಎನ್ನುವುದನ್ನು ಶ್ರೀಧರ ಪೊಲೀಸರ ಎದುರು ಹೇಳಿಕೊಂಡಿದ್ದರಿಂದ ವಿಷಯ ಬೆಳಕಿಗೆ ಬಂದಿದೆ.