ಜಿಲ್ಲೆ

ಹಿಂದೂ ಕಾರ್ಯಕರ್ತ ಸುಹಾಸ್​ ಶೆಟ್ಟಿ ಹತ್ಯೆ​: ಮಂಗಳೂರು ಬಂದ್​, ಹೆಚ್ಚಾದ ಉದ್ವಿಗ್ನ ಪರಿಸ್ಥಿತಿ | Mangaluru

Mangaluru: ಪ್ರವೀಣ್ ನೆಟ್ಟಾರು ಹತ್ಯೆ ನಂತರ ಮತ್ತೆ ಮಂಗಳೂರಿನಲ್ಲಿ ನೆತ್ತರು ಹರಿದಿದ್ದು, ಹಿಂದೂಪರ ಕಾರ್ಯಕರ್ತ ಸುಹಾಸ್​ ಶೆಟ್ಟಿಯನ್ನು ಕಿಡಿಗೇಡಿಗಳ ಗ್ಯಾಂಗ್​ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದಿದೆ. ಸದ್ಯ ಮಂಗಳೂರಿನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಬಸ್​ ಸಂಚಾರ ರದ್ದು ಮಾಡಲಾಗಿದೆ. ಅಲ್ಲದೆ, ಮಂಗಳೂರು ಬಂದ್​ಗೆ ಕರೆ ನೀಡಲಾಗಿದೆ.

ನಿನ್ನೆ ರಾತ್ರಿ (ಮೇ 01) ಮಂಗಳೂರಿನ ಬಜ್ಪೆ ಕಿನ್ನಿಪದವು ಸಮೀಪ ಸುಹಾಸ್ ಶೆಟ್ಟಿ ಮೇಲೆ ಏಕಾಏಕಿ ದಾಳಿ ನಡೆಸಿ, ಮಚ್ಚಿನಿಂದ ಕೊಲೆ ಮಾಡಲಾಗಿದೆ. ಈ ಘಟನೆ ಸಂಭವಿಸಿದ ಬೆನ್ನಲ್ಲೇ ದಕ್ಷಿಣ ಕನ್ನಡದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 5 ಕೆಎಸ್​ಆರ್​ಟಿಸಿ ಬಸ್​ಗಳಿಗೆ ಕಲ್ಲೆಸೆಯಲಾಗಿದ್ದು, ಮುಂಜಾಗ್ರತ ಕ್ರಮವಾಗಿ ಬಸ್​ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

2022ರಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯ ಪ್ರತೀಕಾರವಾಗಿ ಸುರತ್ಕಲ್‌ನಲ್ಲಿ ಫಾಜಿಲ್ ಕೊಲೆ ನಡೆದಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಹಾಗೂ ರೌಡಿಶೀಟರ್ ಸುಹಾಸ್ ಶೆಟ್ಟಿಯನ್ನು ಗುರುವಾರ (ಮೇ.01) ರಾತ್ರಿ 8.27ರ ಸುಮಾರಿಗೆ ಮಂಗಳೂರಿನ ಹೊರವಲಯದ ಬಜ್ಪೆ ಠಾಣೆ ವ್ಯಾಪ್ತಿಯ ಕಿನ್ನಿಪದವು ಪ್ರದೇಶದಲ್ಲಿ ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದಿದ್ದಾರೆ. ಸದ್ಯ ಮಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್​ ಮಾಡಲಾಗಿದೆ.

ಮಂಗಳೂರು ನಗರದಲ್ಲಿ ಇಂದು (ಮೇ 02) ಬೆಳಗ್ಗೆ 6 ಗಂಟೆಯಿಂದ ಮೇ 6ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಹೊರಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಂಗಳೂರು ಹಲವೆಡೆ ಪೊಲೀಸರು ನಾಕಾಬಂದಿ ಹಾಕಿದ್ದಾರೆ. ಅಲ್ಲದೇ ಸೂಕ್ಷ್ಮ ಪ್ರದೇಶದಲ್ಲಿ ರಾತ್ರಿ ಇಡೀ ಗಸ್ತು ತಿರುಗಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದು, ಮಂಗಳೂರು ನಗರಕ್ಕೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.

ಘಟನೆ ಬೆನ್ನಲ್ಲೇ ಎಡಿಜಿಪಿ ಹಿತೇಂದ್ರ ಅವರು ಮಂಗಳೂರು ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾಡಿದ್ದು, ಹತ್ಯೆ ಸಂಬಂಧ ಆರೋಪಿಗಳ ಸುಳಿವು ಸಿಕ್ಕಿದೆ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಮೃತ ಸುಹಾಸ್ ಈ ಹಿಂದೆ ಬಜರಂಗದಳದ ಕಾರ್ಯಕರ್ತರಾಗಿದ್ದರು ಮತ್ತು ಅವರ ವಿರುದ್ಧ ಹಲವು ಕೊಲೆ ಪ್ರಯತ್ನದ ಪ್ರಕರಣಗಳು ದಾಖಲಾಗಿದ್ದವು ಎಂದು ವರದಿಗಳು ಉಲ್ಲೇಖಿಸಿವೆ.