ಆರ್ಡಿ: ಕೆಲವು ದಿನಗಳಿಂದ ಸುರಿದ ಭಾರಿ ಮಳೆಗೆ ಶೇಡಿಮನೆ ಗ್ರಾಮದ ಅರಸಮ್ಮಕಾನು ಸಮೀಪದ ಕೋಟೆರಾಯನ ಬೆಟ್ಟದ ಒಂದು ಭಾಗ ಭಾನುವಾರ ರಾತ್ರಿ ಕುಸಿದು ಜನರಲ್ಲಿ ಆತಂಕ ಉಂಟಾಗಿದೆ. ಪಶ್ಚಿಮಘಟ್ಟಕ್ಕೆ ಹೊಂದಿಕೊಂಡ ಕೋಟೆರಾಯನ ಬೆಟ್ಟದ ಮಧ್ಯ ಭಾಗದಿಂದ 3 ಕಿ.ಮೀ ತನಕ ಗುಡ್ಡ ಜರಿದು, ಹಳ್ಳ ನಿರ್ಮಾಣವಾಗಿ ಸುತ್ತಮುತ್ತಲಿನಿಂದ ಧಾರಾಕಾರ ನೀರು ಹರಿಯುತ್ತಿದೆ.
ಉಡುಪಿ ಹಾಗೂ ಶಿವಮೊಗ್ಗ ಗಡಿ ಭಾಗದಲ್ಲಿ ಕೋಟೆರಾಯನ ಬೆಟ್ಟವಿದೆ. ಮಡಾಮಕ್ಕಿಯಿಂದ 5 ಕಿ.ಮೀ ಮತ್ತು ಶೇಡಿಮನೆ ಗ್ರಾಮದ ಅರಸಮ್ಮಕಾನು ಸಮೀಪದ ಅಗಳಿಬೈಲಿನಿಂದ 3 ಕಿ.ಮೀ.ದೂರದಲ್ಲಿದೆ. ಕೋಟೆರಾಯನ ಬೆಟ್ಟದ ತಳ ಭಾಗಕ್ಕೆ ಹೊಂದಿಕೊಂಡು ಹಲವಾರು ಮನೆಗಳು, ಕೃಷಿ ಭೂಮಿಗಳಿವೆ. ಗುಡ್ಡ ಜರಿದು ಮಣ್ಣು ದೂರದ ತನಕ ಬಿದ್ದಿದೆ. ಹಾನಿ ಸಂಭವಿಸಿಲ್ಲ.
ಹಿಂದೆ ವಾಹನ ವ್ಯವಸ್ಥೆಗಳು ಇಲ್ಲದ ಕಾಲದಲ್ಲಿ ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಜನರು ಸಂಪರ್ಕಿಸಲು ಇದ್ದ ಕಾಲುದಾರಿ ಇದಾಗಿತ್ತು. ಬೆಟ್ಟದ ಮೇಲೆ ಪುರಾತನ ಕೋಟೆರಾಯನ ವಿಗ್ರಹ, ದೇವಸ್ಥಾನ, ಕೋಟೆಗಳು ಹಾಗೂ ಇನ್ನಿತರ ಕುರುಹುಗಳಿವೆ. ಮಳೆಗೆ ಕುಸಿದ ಗುಡ್ಡದ ಭಾಗವು ಕೋಟೆರಾಯನ ಬೆಟ್ಟದ ಇನ್ನೊಂದು ಗುಡ್ಡದ ಭಾಗವಾಗಿದ್ದು, ಐತಿಹಾಸಿಕ ಕುರುಹುಗಳಿಗೆ ಹಾಗೂ ದೇವಸ್ಥಾನಕ್ಕೆ ಹಾನಿ ಸಂಭವಿಸಿಲ್ಲ.