ಜಿಲ್ಲೆ

‘ಕೆತ್ತಿಕಲ್’ ಮರೆತ ಜಿಲ್ಲಾಡಳಿತ : ಮನೆ ಕಳೆದುಕೊಂಡ ಸಂತ್ರಸ್ತರು ಅತಂತ್ರ : ಮುಂದಿನ ಮಳೆಗಾಲಕ್ಕೆ ಮತ್ತೊಂದು ದುರಂತ ಭೀತಿ

ಸೌಮ್ಯ ಆರ್

ಧನಂಜಯ ಗುರುಪುರ

ಮಂಗಳೂರು- ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ವಾಮಂಜೂರು ಕೆತ್ತಿಕಲ್‌ನಲ್ಲಿ ಪ್ರಸಕ್ತ ಮಳೆಗಾಲಕ್ಕೆ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದು, ಗುಡ್ಡದ ಮೇಲ್ಭಾಗದ 12 ಮನೆಗಳ ಜನರನ್ನು ಸ್ಥಳಾಂತರಿಸಿರುವ ಜಿಲ್ಲಾಡಳಿತ, ಸಂತ್ರಸ್ತರಿಗೆ ಪರಿಹಾರ ನೀಡುವ ಹಾಗೂ ಕುಸಿದ ಗುಡ್ಡೆ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸುವ ಭರವಸೆ ನೀಡಿತ್ತು. ಆದರೆ ಇದುವರೆಗೆ ಪರಿಹಾರವೂ ಇಲ್ಲ, ತಡೆಗೋಡೆಯೂ ಇಲ್ಲದಂತಾಗಿದ್ದು, ಮುಂದಿನ ಮಳೆಗಾಲಕ್ಕೆ ಇಲ್ಲಿ ಮತ್ತೊಂದು ಗಂಡಾಂತರ ಸೃಷ್ಟಿಗೆ ಜಿಲ್ಲಾಡಳಿತ ಮುನ್ನುಡಿ ಬರೆಯುವಂತಿದೆ..!

ಪ್ರಸಕ್ತ ಮಳೆಗಾಲದಲ್ಲಿ ಕೆತ್ತಿಕಲ್ ಗುಡ್ಡ ಭಾರಿ ಸುದ್ದಿ ಮಾಡಿತ್ತು. ಗುಡ್ಡದಿಂದ ಹೆದ್ದಾರಿಯತ್ತ ದೊಡ್ಡ ಪ್ರಮಾಣದಲ್ಲಿ ಮಣ್ಣು ಕುಸಿದು, ನೀರು ಉಕ್ಕೇರಿ ಹರಿಯುತ್ತಿದ್ದಾಗ ರಾಜ್ಯದ ಮಂತ್ರಿಗಳು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಮತ್ತು ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ‘ಬೇಸಿಗೆಯಲ್ಲಿ ಎಲ್ಲವೂ ಸರಿಯಾಗಲಿದೆ. ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು’ ಎಂಬ ಭರವಸೆ ಸಿಕ್ಕಿತ್ತು. ಮಳೆ ಕಡಿಮೆಯಾಗಿದ್ದರೂ ಜಿಲ್ಲಾಡಳಿತ ಭರವಸೆ ಬಿಡಿ, ಕೆತ್ತಿಕಲ್ ದುರಂತವನ್ನೇ ಮರೆತಂತಿದೆ.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪಿಡಬ್ಲುೃಡಿ ರಾಜ್ಯ ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸಂಸದರು, ಶಾಸಕರು, ಮನಪಾ ಆಯುಕ್ತರ ಸಹಿತ ಸಾಲು ಸಾಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಭರವಸೆ ನೀಡಿದ್ದರು. ಆದರೆ ಮಳೆ ಕಡಿಮೆಯಾಗುತ್ತಲೇ ಕೆತ್ತಿಕಲ್‌ನಲ್ಲಿ ಮತ್ತೆ ಹೆದ್ದಾರಿ ವಿಸ್ತರಣೆಗಾಗಿ ಯಥೇಚ್ಛ ಗುಡ್ಡ ಕೊರೆಯಲಾಗುತ್ತಿದೆ. ಈ ಬಾರಿಯೂ ಇಲ್ಲಿ ಅವೈಜ್ಞಾನಿಕವಾಗಿ ಮಣ್ಣು ಕೊರೆದು ಕಾಮಗಾರಿ ನಡೆಸಲಾಗುತ್ತಿದ್ದು, ತಡೆಗೋಡೆ ಅಥವಾ ಅಗತ್ಯ ರಕ್ಷಣಾ ಕಾಮಗಾರಿ ನಡೆಸದೆ ಹೋದಲ್ಲಿ ಮುಂದಿನ ಮಳೆಗಾಲಕ್ಕೆ ಮತ್ತೊಂದು ದುರಂತಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಗುಡ್ಡಕ್ಕೆ ಪ್ಲಾಸ್ಟರ್

ಗುಡ್ಡ ಪ್ರದೇಶದಲ್ಲಿ ನೀರಿನ ಒರೆತ ಹೆಚ್ಚಾಗಿ, ಪದೇ ಪದೆ ಮಣ್ಣು ಕುಸಿದಿದೆ. ಕುಸಿದ ಗುಡ್ಡ ಪ್ರದೇಶಕ್ಕೆ ರಕ್ಷಣಾ ಕಾರ್ಯದನ್ವಯ ಸಿಮೆಂಟ್ ಹಾಸು(ಪ್ಲಾಸ್ಟರ್) ಅಳವಡಿಸಲಾಗಿದೆ. ಮಳೆ ಬರುತ್ತಿರುವಾಗಲೇ ಪ್ಲಾಸ್ಟರ್ ಕಾಮಗಾರಿ ನಡೆದಿದ್ದು, ಹೆಚ್ಚಿನ ಭಾಗದಲ್ಲಿ ಪ್ಲಾಸ್ಟರ್‌ನೊಂದಿಗೆ ಗುಡ್ಡದ ಮಣ್ಣು ಕುಸಿದಿದೆ. ಗುಡ್ಡದ ಮಣ್ಣು ತೆಗೆಯಲಾದ ಪ್ರದೇಶದಂಚಿನಲ್ಲಿ ಮತ್ತೆ ಅಷ್ಟೇ ಎತ್ತರದ ಗುಡ್ಡವಿದ್ದು, ಅಲ್ಲೂ ಕೆಲವು ಮನೆಗಳಿವೆ. ಅದು ಮುಂದಿನ ಮಳೆಗಾಲಕ್ಕೆ ಮತ್ತೊಂದು ಪ್ರಕೃತಿ ವಿಕೋಪಕ್ಕೆ ಕಾರಣವಾಗಬಹುದು ಎಂದು ಸ್ಥಳೀಯರು ಭೀತಿ ವ್ಯಕ್ತಪಡಿಸಿದ್ದಾರೆ.

ಕೆತ್ತಿಕಲ್ ಪ್ರದೇಶದಲ್ಲಿ ತಕ್ಷಣ ರಕ್ಷಣಾ ಗೋಡೆ ನಿರ್ಮಿಸಬೇಕು. ಎತ್ತರ ಗುಡ್ಡದ ಭಾಗ ಬಿಟ್ಟು ಖಾಲಿ ಜಾಗದಲ್ಲಿ ಹೆದ್ದಾರಿ ವಿಸ್ತರಣೆ ಕಾರ್ಯ ನಡೆಯಬೇಕು. ಸಂತ್ರಸ್ತರ 12 ಕುಟುಂಬಗಳಿಗೆ ಸೂಕ್ತ ಪರಿಹಾರ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಮುಂದಿನ ಮಳೆಗಾಲಕ್ಕೆ ಕೆತ್ತಿಕಲ್‌ನಲ್ಲಿ ಮತ್ತೊಂದು ದುರಂತಕ್ಕೆ ಜಿಲ್ಲಾಡಳಿತವೇ ಹಾದಿ ಮಾಡಿಕೊಟ್ಟಂತಾಗುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಸಂತ್ರಸ್ತರು ಕಂಗಾಲು

ಧಾರಾಕಾರ ಮಳೆ ಸುರಿಯುತ್ತಿರುವಾಗಲೇ ಜಿಲ್ಲಾಡಳಿತ ಕೆತ್ತಿಕಲ್ ಗುಡ್ಡದ ಮೇಲ್ಭಾಗದಲ್ಲಿ 12 ಮನೆ ಮಂದಿಯನ್ನು ಸ್ಥಳಾಂತರಿಸಿ, ಶೀಘ್ರ ಪರಿಹಾರದ ಭರವಸೆ ನೀಡಿತ್ತು. ಆದರೆ ಆ ಬಳಿಕ ಗುಡ್ಡ ಕುಸಿದ ಭಾಗದಲ್ಲಿ ಜಿಲ್ಲಾಡಳಿತ ತಡೆಗೋಡೆ ನಿರ್ಮಾಣ ಕಾರ್ಯ ಆರಂಭಿಸಿಲ್ಲ ಅಥವಾ ಮನೆ ಕಳೆದುಕೊಂಡ ಸಂತ್ರಸ್ತರ ಕಷ್ಟ ಆಲಿಸುವ ವ್ಯವಧಾನ ತೋರಿಸಿಲ್ಲ. ಬದಲಾಗಿ ಕೆತ್ತಿಕಲ್‌ನಲ್ಲಿ ಮತ್ತಷ್ಟು ಎತ್ತರದ ಗುಡ್ಡ ಕೊರೆದು ಹೆದ್ದಾರಿ ನಿರ್ಮಾಣ ಕಾರ್ಯ ಮುಂದುವರಿಸಿದೆ. ಒಂದೊಮ್ಮೆ ಪರಿಹಾರ ನೀಡದೆ ಹೋದಲ್ಲಿ ಮತ್ತದೇ ಮನೆಗೆ ವಾಪಸ್ ಆಗಬೇಕಾಗುತ್ತದೆ. ಲಕ್ಷಾಂತರ ರೂಪಾಯಿಯ ಹೊಸ ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ಮನೆ ಅಥವಾ ನಿವೇಶನ ವ್ಯವಸ್ಥೆ ಮಾಡಿಕೊಡಬೇಕು. ಇಲ್ಲದಿದ್ದರೆ ಅವರು ಎಲ್ಲಿಗೆ ಹೋಗಬೇಕು? ತೆರವಾದ ಮನೆಗಳಲ್ಲಿ ಹಗಲಲ್ಲಿ ವಾಸ್ತವ್ಯ ಹೂಡಬಹುದು ಎಂದು ಮನಪಾ ಹೊರಡಿಸಿರುವ ನೋಟಿಸ್‌ನಲ್ಲಿ ಸ್ಪಷ್ಟಪಡಿಸಿದ್ದರೂ ಈ ಆದೇಶದ ಬೆನ್ನಲ್ಲೇ ಸಂತ್ರಸ್ತರ ಮನೆಗಳ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿದು ಹಾಕಿತ್ತು. ಕಾಯಂ ಆಗಿ 12 ಮನೆ ಖಾಲಿ ಮಾಡಿಸುವುದೇ ಜಿಲ್ಲಾಡಳಿತ ಉದ್ದೇಶವಾಗಿತ್ತೇ ಎಂದು ಸಂತ್ರಸ್ತ ಯೋಗೀಶ್ ವಾಮಂಜೂರು ಪ್ರಶ್ನಿಸಿದ್ದಾರೆ.

ಕೆತ್ತಿಕಲ್ ಭಾಗದಲ್ಲಿ(ವಾಮಂಜೂರಿನಿಂದ ಗುರುಪುರದತ್ತ ಸಾಗುವಾಗ) ಬಲ ಭಾಗದಲ್ಲಿ ಸಾಕಷ್ಟು ಖಾಲಿ ಜಾಗವಿದ್ದು, ಅದು ನೇರವಾದ ಹೆದ್ದಾರಿ ನಿರ್ಮಾಣಕ್ಕೆ ಯೋಗ್ಯವಾಗಿದ್ದರೂ ಎಡ ಬದಿಯಲ್ಲಿ ತಿರುವೈಲು ಶಾಲೆಯ ಸಭಾಭವನ ತೆರವಿನವರೆಗೆ ಜಾಗ ಕಬಳಿಸಿ ಗುಡ್ಡ ಕೊರೆದು, ಕಡಿದಾದ ಹೆದ್ದಾರಿ ತಿರುವು ನಿರ್ಮಿಸಲಾಗುತ್ತಿದೆ. ಇದು ಸಂಪೂರ್ಣ ಅವೈಜ್ಞಾನಿಕ. ಹೆದ್ದಾರಿ ಅಂಚಿನಲ್ಲಿ ಮತ್ತಷ್ಟು ಎತ್ತರದ ಗುಡ್ಡ ಉಳಿದುಕೊಳ್ಳಲಿದೆ. ಇದು ಹೆದ್ದಾರಿ ಹಾಗೂ ಮೇಲ್ಭಾಗದ ಮನೆಗಳಿಗೆ ಅಪಾಯಕಾರಿ. ಈ ಬಗ್ಗೆ ಹೆದ್ದಾರಿ ಇಲಾಖೆಯ ಇಂಜಿನಿಯರ್‌ಗಳೊಂದಿಗೆ ಎರಡೆರಡು ಬಾರಿ ಚರ್ಚಿಸಿದ್ದರೂ ಪ್ರಯೋಜನವಾಗಿಲ್ಲ. ಮೋಹನದಾಸ್ ಬಂಗೇರ ವಾಮಂಜೂರು, ಉದ್ಯಮಿ
ಕೆತ್ತಿಕಲ್‌ನಲ್ಲಿ ಬಲಭಾಗದಲ್ಲಿ ಸಾಕಷ್ಟು ಖಾಲಿ ಜಾಗವಿರುವ ದೃಶ್ಯ.
ಪ್ಲಾಸ್ಟರ್ ಅಳವಡಿಸಿದಲ್ಲಿ ಪ್ಲಾಸ್ಟರ್ ಅಳವಡಿಸಲಾಗಿರುವುದು.