ತುಂಬೆ ತಿರುವಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ನೀರು ತುಂಬಿ ಕೊಂಡಿರುವುದು 
ಜಿಲ್ಲೆ

ಹೆದ್ದಾರಿ ತುಂಬೆ ತಿರುವಿಲ್ಲಿ ‘ಕೊಳ’ : ಇಲಾಖೆ ಅಸಡ್ಡೆಯಿಂದ ಪ್ರತಿ ವರ್ಷ ಮರುಕಳಿಸುವ ಸಮಸ್ಯೆ

ಸಂದೀಪ್ ಸಾಲ್ಯಾನ್ ಬಂಟ್ವಾಳ

ಜೋರಾದ ಒಂದು ಮಳೆ ಬಂದರೆ ಸಾಕು ರಸ್ತೆಯೇ ಕೆರೆಯಾಗಿ ಬಿಡುತ್ತದೆ. ಇಡೀ ರಸ್ತೆಯಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ರಸ್ತೆ ಎಲ್ಲಿ ಇದೆ ಎಂದು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ರಸ್ತೆಯಲ್ಲಿ ನೀರೋ? ನೀರಿನಲ್ಲಿ ರಸ್ತೆಯೋ? ಎನ್ನವಂತೆ ಭಾಸವಾಗುವಂತೆ ಮಳೆ ನೀರು ರಸ್ತೆಯನ್ನು ಆಕ್ರಮಿಸಿಕೊಂಡಿದೆ. ಇದು ತುಂಬೆ ಕೊಳದ ಕಥೆ!

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತುಂಬೆಯ ತಿರುವು ರಸ್ತೆಯಲ್ಲಿ ಮಳೆಗಾಲದಲ್ಲಿ ಕೃತಕ ನೆರೆ ಸೃಷ್ಟಿಯಾಗುತ್ತದೆ. ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಮಳೆ ನೀರೆಲ್ಲಾ ರಸ್ತೆಯಲ್ಲಿ ನಿಂತು ಇದರ ಮೇಲೆ ವಾಹನಗಳು ರಭಸದಲ್ಲಿ ಹೋಗುವಾಗ ನೀರೆಲ್ಲಾ ಡಿವೈಡರ್‌ನ ಇನ್ನೊಂದು ಭಾಗದಲ್ಲಿ ಹೋಗುವ ವಾಹನಗಳ ಮೇಲೂ ಚಿಮ್ಮುತ್ತ್ತದೆ. ಕಂಬಳ ಗದ್ದೆಯಲ್ಲಿ ಕೋಣಗಳು ನಿಶಾನಿಗೆ ನೀರು ಹಾಯಿಸುವಂತೆ ಈ ದೃಶ್ಯ ಕಂಡು ಬರುತ್ತದೆ.

ಗಮನ ಹರಿಸದ ಇಲಾಖೆ

ಪ್ರತಿ ವರ್ಷ ರಸ್ತೆಯಲ್ಲಿ ಕೊಳದಂತೆ ನೀರು ತುಂಬಿಕೊಂಡರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇತ್ತ ಗಮನ ಹರಿಸಿಲ್ಲ, ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಿಲ್ಲ. ಕೆಲವು ವರ್ಷಗಳ ಹಿಂದೆ ಈ ಸಮಸ್ಯೆಯಿಂದ ಕಂಗೆಟ್ಟ ಸ್ಥಳೀಯರು ಎಚ್ಚರಿಕೆ, ನಿಧಾನವಾಗಿ ಚಲಿಸಿರಿ, ಸಂಸದರ ಈಜುವ ಕೊಳ ಇದೆ ಎಂದು ಬ್ಯಾನರ್ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ರಸ್ತೆ ಬದಿ ಚರಂಡಿ ಮಾಡಿ ನೀರು ಹರಿದು ಹೋಗಲು ವ್ಯವಸ್ಥೆ ಕಲ್ಪಿಸಿದ್ದರು. ಪ್ರತೀ ವರ್ಷ ಇಲ್ಲಿನ ಚರಂಡಿಯಲ್ಲಿ ಹೂಳು ತುಂಬಿ ಕೊಳ್ಳುವುದರಿಂದ ನೀರು ಹರಿದು ಹೋಗಲು ಸಾಧ್ಯವಾಗದೆ ಹೆದ್ದಾರಿಯಲ್ಲಿಯೇ ನಿಲುತ್ತಿದೆ.
ಅದೇ ರಾಗ ಅದೇ ಹಾಡು

ರಾಷ್ಟ್ರೀಯ ಹೆದ್ದಾರಿಯ ತುಂಬೆ ತಿರುವಿನಲ್ಲಿ ರಸ್ತೆಯಿಡೀ ನೀರು ನಿಲ್ಲುವುದು ಹಳೆಯ ಸಮಸ್ಯೆ. ಹೆದ್ದಾರಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ವರ್ಷದಿಂದಲೂ ಮಳೆಗಾಲದಲ್ಲಿ ಈ ಸಮಸ್ಯೆ ಆರಂಭಗೊಂಡಿದೆ. ಮಾನ್ಸೂನ್ ಆರಂಭವಾಗುವ ಮೊದಲೇ ಚರಂಡಿಯ ಹೂಳೆತ್ತಿ ನೀರು ಹರಿದು ಹೋಗಲು ವ್ಯವಸ್ಥೆ ಕಲ್ಪಿಸಿದರೆ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸ ಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಆದರೆ ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಗಮನ ಹರಿಸದ ಪರಿಣಾಮ ಪ್ರತಿ ವರ್ಷ ಈ ತೊಂದರೆ ಕಾಡುತ್ತಿದೆ.

ದ್ವಿಚಕ್ರ ವಾಹನ ಸವಾರರಿಗೆ ಒದ್ದೆ ಭಾಗ್ಯ

ತುಂಬೆ ತಿರುವು ರಸ್ತೆಯಲ್ಲಿ ನೀರು ತುಂಬಿ ಕೊಂಡಿರುವುದರಿಂದ ಅಲ್ಲಿ ಬರುವವರೆಗೆ ವಾಹನ ಸವಾರರಿಗೆ ರಸ್ತೆಯಲ್ಲಿ ನೀರು ನಿಂತಿರುವುದು ಅರಿವಿಗೆ ಬರುವುದಿಲ್ಲ. ವೇಗದಿಂದ ಬರುವ ವಾಹನಗಳು ರಸ್ತೆ ಮಧ್ಯೆ ಕೊಳದಲ್ಲಿ ತುಂಬಿ ಕೊಂಡಿರುವಂತಿರುವ ನೀರನ್ನು ನೋಡಿ ಏಕಾಏಕಿ ಗಲಿಬಿಲಿಗೊಳ್ಳುತ್ತಾರೆ. ದೊಡ್ಡ ವಾಹನಗಳ ಅತಿ ವೇಗದ ಸಂಚಾರದಿಂದ ದ್ವಿಚಕ್ರ ವಾಹನ ಸವಾರರು ನೀರು ಎರಚಿಸಿ ಕೊಂಡು ಸಂಪೂರ್ಣ ಒದ್ದೆಯಾಗುವ ಘಟನೆ ನಿತ್ಯ ನಡೆಯುತ್ತಿದೆ.

ತುಂಬೆ ರಸ್ತೆ ತಿರುವಿನಲ್ಲಿ ನೀರು ತುಂಬಿ ಕೊಂಡಿರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅನೇಕ ಮಂದಿ ಬೈಕ್ ಸವಾರರು, ರಿಕ್ಷಾದಲ್ಲಿ ಪ್ರಯಾಣಿಸುವವರು ಇತರ ವಾಹನಗಳಿಂದ ನೀರು ಎರಚಿ ಒದ್ದೆಯಾದ ಘಟನೆಯೂ ನಡೆದಿದೆ. ಪ್ರತಿ ವರ್ಷ ಈ ಸಮಸ್ಯೆ ಇದ್ದರೂ ಬಗೆಹರಿಸುವ ಪ್ರಯತ್ನವನ್ನು ಎನ್‌ಎಚ್‌ಎಐ ಮಾಡುತ್ತಿಲ್ಲ.-ಲೋಕೇಶ್ ಕೆ.ಆರ್.ತಲಪಾಡಿ