ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಮೇ ತಿಂಗಳಿಂದ ಸತತ ಸುರಿಯುತ್ತಿರುವ ಮಳೆ ಕಾರಣಕ್ಕೆ ನಿಧಾನವಾಗಿದ್ದ ರಾಷ್ಟ್ರೀಯ ಹೆದ್ದಾರಿಯ 75ರ ವಿಸ್ತರಣೆ ಕಾಮಗಾರಿಗೆ ಮಳೆ ಒಂದಷ್ಟು ಕಡಿಮೆಯಾಗುತ್ತಿದ್ದಂತೆಯೇ ಪುನರಪಿ ಚಾಲನೆ ದೊರಕಿದೆ. ಅಲ್ಲಲ್ಲಿ ಬಾಕಿ ಉಳಿದಿರುವ ಅಂತಿಮ ಹಂತದ ಕಾಮಗಾರಿ ವೇಗ ಪಡೆದಿದೆ.
ಮಳೆಗಾಲ ನಿಗದಿತ ಅವಧಿಗೆ ಮೊದಲೇ ಪ್ರಾರಂಭಗೊಂಡ ಕಾರಣದಿಂದ ಹಾಗೂ ಭಾರಿ ಪ್ರಮಾಣದಲ್ಲಿ ಮಳೆ ಸುರಿದ ಕಾರಣದಿಂದ ಹೆದ್ದಾರಿಯ ಹಲವೆಡೆ ರಸ್ತೆಯಲ್ಲಿ ಹೊಂಡಗುಂಡಿಗಳು ಮೂಡಿ ಸಂಚಾರಕ್ಕೆ ತೊಡಕುಂಟಾಗಿತ್ತು. ದರೂ ಆ ವೇಳೆಗೆ ಬಹುತೇಕ ಪೂರ್ಣಗೊಂಡಿದ್ದ ಮೇಲ್ಸೇತುವೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಮೇಲ್ಸೇತುವೆಯ ಎರಡೂ ಪಾರ್ಶ್ವದಲ್ಲಿ ಕಾಂಕ್ರೀಟ್ ಗಾರ್ಡ್‌ಗಳ ನಿರ್ಮಾಣಕ್ಕೆ ಇದೀಗ ಚಾಲನೆ ನೀಡಲಾಗಿದೆ.
ಮಳೆ ಸುರಿದರೂ ಲೆಕ್ಕಿಸದೆ ಪೂರಕ ಸಿದ್ಧತೆಗಳನ್ನು ನಡೆಸಿ ಕಾಂಕ್ರೀಟ್ ಗಾರ್ಡ್ ನಿರ್ಮಿಸುವ ಕಾರ್ಯ ಯಂತ್ರಗಳ ಸಹಾಯದಿಂದ ನಡೆಯುತ್ತಿದೆ. ಅಪೂರ್ಣವಾಗಿರುವ ಹೆದ್ದಾರಿ ಬದಿಯ ಚರಂಡಿಯ ನಿರ್ಮಾಣ ಕಾರ್ಯವನ್ನೂ ನಡೆಸಲಾಗುತ್ತಿದೆ. ಅಂಡರ್ ಪಾಸ್‌ಗಳಲ್ಲಿ ವಿದ್ಯುತ್ ದೀಪ ಅಳವಡಿಸುವ ಕಾರ್ಯ ನಡೆಯುತ್ತಿದೆ.
ಪೂರ್ಣಗೊಳ್ಳಲು ಇನ್ನಷ್ಟು ಸಮಯ
ಹೆದ್ದಾರಿ ವಿಸ್ತರಣಾ ಕಾಮಗಾರಿ ವ್ಯಾಪ್ತಿಯ ಪೆರ್ನೆ, ನೀರಕಟ್ಟೆ ಪ್ರದೇಶಗಳಲ್ಲಿ ಬಂಡೆಕಲ್ಲುಗಳ ತೆರವು ಕಾರ್ಯ ಇನ್ನೂ ಪೂರ್ಣಗೊಳ್ಳದ ಕಾರಣ ಈ ಭಾಗದಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ಪೂರ್ಣಗೊಳ್ಳಲು ಇನ್ನಷ್ಟು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ನೆಲ್ಯಾಡಿಯಲ್ಲಿ ಜನರ ಪ್ರತಿಭಟನೆ ಒತ್ತಡದಿಂದ ಸ್ಥಗಿತಗೊಂಡಿದ್ದ ಕಾಮಗಾರಿ ಇನ್ನು ಮುಂದಿನ ಬೇಸಿಗೆಯಲ್ಲಿ ಪುನರಾರಂಭಗೊಳ್ಳುವ ನಿರೀಕ್ಷೆ ಇದ್ದು, ಹೆಚ್ಚುವರಿ ಅಂಡರ್‌ಪಾಸ್‌ಗಳನ್ನು ಒದಗಿಸುವ ಮೂಲಕ ನೆಲ್ಯಾಡಿ ಪರಿಸರದ ಜನತೆಯನ್ನು ಸಮಾಧಾನಿಸುವ ಪ್ರಯತ್ನ ನಡೆದಿದೆ.
ನೆಲ್ಯಾಡಿಯಲ್ಲಿ ಸಮಸ್ಯೆ ಉಲ್ಬಣ ಸಾಧ್ಯತೆ
ನೆಲ್ಯಾಡಿಯಲ್ಲಿ ಹೆದ್ದಾರಿ ಇಲಾಖೆ ನಿಯಮಾನುಸಾರ ಇರಬೇಕಾದ ವಿಸ್ತೀರ್ಣವನ್ನು ಹೊಂದಿರುವ ಸರ್ವೀಸ್ ರಸ್ತೆಯ ನಿರ್ಮಾಣದ ಬಗ್ಗೆಯೂ ಗಮನ ಹರಿಸಬೇಕಾಗಿದೆ. ಸ್ಥಳೀಯ ವ್ಯಾಪಾರಿಗಳ ಬೇಡಿಕೆಯಂತೆ ಅಂದಿನ ಜನಪ್ರತಿನಿಧಿಗಳ ಪ್ರಭಾವವನ್ನು ಬಳಸಿ ಸರ್ವೀಸ್ ರಸ್ತೆಯ ಅಗಲವನ್ನು ಕಿರಿದಾಗಿಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇದು ನಿಜವಾಗಿದ್ದಲ್ಲಿ ಭವಿಷ್ಯದ ದಿನಗಳಲ್ಲಿ ನೆಲ್ಯಾಡಿ ಪೇಟೆಯು ಸಮಸ್ಯೆಯ ನೆಲೆಯಾಗಿ ಪರಿವರ್ತನೆಗೊಳ್ಳುವುದರಲ್ಲಿ ಸಂದೇಹವಿಲ್ಲ. ಈ ಕಾರಣಕ್ಕೆ ಇನ್ನು ಮುಂದಿನ ದಿನಗಳಲ್ಲಿ ಕಾಮಗಾರಿ ಪುನರಾರಂಭಿಸುವ ಸಮಯದಲ್ಲಿ ಭವಿಷ್ಯತ್ ಕಾಲದ ಹಿತದೃಷ್ಟಿಯನ್ನು ಮುಂದಿರಿಸಿ ನಿಯಮಬದ್ಧ ಕಾಮಗಾರಿ ನಡೆಸಲು ಹೆದ್ದಾರಿ ಇಲಾಖೆ ಗಮನಹರಿಸಬೇಕಾಗಿದೆ. ಆ ಮೂಲಕ ಅಪಘಾತ ರಹಿತ ಹೆದ್ದಾರಿ ಸಂಚಾರದ ಕನಸನ್ನು ನನಸಾಗಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.