ವಿಜಯವಾಣಿ ಸುದ್ದಿಜಾಲ ಕುಂದಾಪುರ
ಅವಘಡಗಳು ನಡೆದಾಗ ಕೂಡಲೇ ನೆರವಿಗೆ ಧಾವಿಸುವವರು ಆಟೋ ಚಾಲಕರು. ಸಮಾಜದ ಕಷ್ಟಗಳಿಗೆ ಸ್ಪಂದಿಸುವ ರಿಕ್ಷಾ ಚಾಲಕರ ಬದ್ಧತೆ ಮೆಚ್ಚುವಂಥದ್ದು. ಹೆಮ್ಮಾಡಿಯ ರಿಕ್ಷಾ ಚಾಲಕರು ಈ ವಿಚಾರದಲ್ಲಿ ಒಂದು ಕೈ ಮೇಲಿದ್ದಾರೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವರ ಶ್ರೀ ಮನ್ಮಹಾರಥೋತ್ಸವದ ಪ್ರಯುಕ್ತ ಹೆಮ್ಮಾಡಿ ಸರ್ಕಾರಿ ಶಾಲಾ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಲಕ್ಷ್ಮೀನಾರಾಯಣ ರಿಕ್ಷಾ ಚಾಲಕರ ಹಾಗೂ ಮಾಲೀಕರ ಸಂಘದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಜಿಲ್ಲಾ ಗೃಹರಕ್ಷಕ ದಳದ ಸೆಕೆಂಡ್ ಇನ್ ಕಮಾಂಡ್ ಕೆ.ಸಿ.ರಾಜೇಶ್ ಕಾರ್ಯಕ್ರಮ ಉದ್ಘಾಟಿಸಿದರು. ವಾಗ್ಮಿ ಎನ್.ಆರ್.ದಾಮೋದರ್ ಶರ್ಮ ಬಾರ್ಕೂರು ಶುಭಹಾರೈಸಿದರು. ಶ್ರೀ ಲಕ್ಷ್ಮೀನಾರಾಯಣ ರಿಕ್ಷಾ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಪ್ರವೀಣ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಹರೀಶ್ ಭಂಡಾರಿ, ಶಶಿಕಲಾ, ನಾಗರಾಜ್ ಪುತ್ರನ್, ಜಗದೀಶ್ ಶೆಟ್ಟಿ, ಮಂಜುನಾಥ್ ಪೂಜಾರಿ, ನಾಗರಾಜ್ ಗಾಣಿಗ ಉಪಸ್ಥಿತರಿದ್ದರು. ಮಹೇಂದ್ರ ದೇವಾಡಿಗ ಸ್ವಾಗತಿಸಿದರು. ಅಕ್ಷಯ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಕಿರಣ್ ದೇವಾಡಿಗ ಹೊಸ್ಕಳಿ ಮತ್ತು ಅನಿಲ್ ಕಟ್‌ಬೆಲ್ತೂರು ಸಹಕರಿಸಿದರು.
ಭಾರತೀಯ ಗಡಿ ಭದ್ರತಾ ಪಡೆಯ ಯೋಧೆ ಸುನೀತಾ ಪೂಜಾರಿ ಹೆಮ್ಮಾಡಿ, ಗಣ್ಯರಾದ ಗಣೇಶ ಮೊಗವೀರ, ಬೆಂಕಿ ಮಣಿ ಸಂತು ಅರೆಹೊಳೆ, ನವೀನ್ ರಾವ್, ರಾಜೇಶ್ ಮೆಂಡನ್, ಅಮೈರಾ, ಪ್ರಕಾಶ್ ಹೆಮ್ಮಾಡಿ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಅಶಕ್ತರಿಗೆ ವೈದ್ಯಕೀಯ ನೆರವು ಹಸ್ತಾಂತರಿಸಲಾಯಿತು.