ಉಪ್ಪಿನಂಗಡಿ: ಮಾತೃಭಾಷೆ ಉಳಿಸಿ ಬೆಳೆಸುವ ಮೂಲಕ ಭಾಷೆಯ ಸೊಗಸನ್ನು ಎಳೆಯ ಮನಸ್ಸುಗಳಿಗೆ ಉಣಬಡಿಸಬೇಕು. ಸಂಬಂಧವಾಚಕಗಳು, ಆವರ್ತನ ನುಡಿಗಟ್ಟುಗಳನ್ನು ಉಳಿಸಬೇಕು ಎಂದು ವಸುಧಾ ಪ್ರತಿಷ್ಠಾನದ ವಿಶ್ವಸ್ತ ಡಾ.ತಾಳ್ತಜೆ ವಸಂತಕುಮಾರ ಪ್ರತಿಪಾದಿಸಿದರು.
ಭಾನುವಾರ ಉಪ್ಪಿನಂಗಡಿಯಲ್ಲಿ ವಸುಧಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ 14ನೇ ಹೇಮಂತ ಹಬ್ಬದ ಹೇಮಂತ ಕಲಾಪದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಮಾತನಾಡಿ, ಶಿಕ್ಷಣದೊಟ್ಟಿಗೆ ಆಧ್ಯಾತ್ಮಿಕ ಶಕ್ತಿಯೂ ಬೇಕಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳು ಗಮನ ಹರಿಸಬೇಕಾಗಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಮಹಾಲಿಂಗೇಶ್ವರ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಶ್ರೀನಾಥ್, ಎಚ್.ಜಿ.ಶ್ರೀಧರ್, ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಪ್ರಮುಖರಾದ ವರದರಾಜ ಚಂದ್ರಗಿರಿ, ಡಾ.ಮಾಧವ ಭಟ್, ಬಿ.ಐತ್ತಪ್ಪ ನಾಯ್ಕ, ಡಾ.ರಾಜಾರಾಮ ಕೆ.ಬಿ, ಉದಯಕುಮಾರ್ ಭಟ್, ತುಕಾರಾಮ ಪೂಜಾರಿ, ಚಂದ್ರಶೇಖರ್ ತಾಳ್ತಜೆ, ಕೆ.ವಿ.ಪ್ರಸಾದ್, ರವೀಂದ್ರ ದರ್ಬೆ, ಎನ್.ಗೋಪಾಲ ಹೆಗ್ಡೆ, ಡಾ.ಸುಲೇಖಾ ವರದರಾಜ್, ರಾಧಾಕೃಷ್ಣ ಬೊಳ್ಳಾವು, ನರಸಿಂಹ ಭಟ್ ಮೂಡಾಜೆ, ಕಾಮಾಕ್ಷಿ ಜಿ.ಹೆಗ್ಡೆ ಮೊದಲಾದವರು ಭಾಗವಹಿಸಿದ್ದರು.
ಹೇಮಂತ ಹಬ್ಬದ ಪ್ರಯುಕ್ತ ಹೇಮಂತ ಕಲಾಪ, ಕೋದಂಡದ ಕೊನೆ ಎಂಬ ಹೇಮಂತ ರೂಪಕ, ಸೀತಾಕಲ್ಯಾಣ ಎಂಬ ಹೇಮಂತ ಧೀಂಗಿಣ ಕಾರ್ಯಕ್ರಮ ಜರುಗಿದವು.
ಉಪನ್ಯಾಸಕ ಸುಬ್ಬಪ್ಪ ಕೈಕಂಬ ಅಭಿನಂದನಾ ನುಡಿಗಳನ್ನಾಡಿದರು. ವಸುಧಾ ಪ್ರತಿಷ್ಠಾನದ ಡಾ.ಗೋವಿಂದ ಪ್ರಸಾದ್ ಕಜೆ ಸ್ವಾಗತಿಸಿದರು. ವೇದವ್ಯಾಸ ರಾಮಕುಂಜ ವಂದಿಸಿದರು.