ಜಿಲ್ಲೆ

ಮಲೆನಾಡು, ಕರಾವಳಿಯಲ್ಲಿ ಮಳೆ ಬಿರುಸು:ನಾಳೆ 5 ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​​

ಬೆಂಗಳೂರು: ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಪ್ರದೇಶಗಳಲ್ಲಿ ಮಂಗಳವಾರವೂ ಧಾರಾಕಾರವಾಗಿ ಮಳೆ ಬಿದ್ದಿದೆ. ಉಡುಪಿ ಜಿಲ್ಲೆಯ ಸಿದ್ದಾಪುರ, ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್​ ರಾಕ್​, ಕದ್ರಾ, ಬನವಾಸಿ, ಯಲ್ಲಾಪುರ, ಬೆಳಗಾವಿಯ ಖಾನಾಪುರ, ಲೋಂಡಾ, ಶಿವಮೊಗ್ಗದ ಆಗುಂಬೆ, ಕೊಡಗಿನ ಸೋಮವಾರಪೇಟೆ, ದಕ್ಷಿಣ ಕನ್ನಡದ ಧರ್ಮಸ್ಥಳ, ಚಿಕ್ಕಮಗಳೂರಿನ ಕಳಸ ಮತ್ತು ಶೃಂಗೇರಿಯಲ್ಲಿ 8-10 ಸೆಂಮೀ ಮಳೆ ಸುರಿದಿತ್ತು.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜೂ.25ರಿಂದ ಜೂ.27ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್​ ಅಲರ್ಟ್​​​​​ ಘೋಷಿಸಿದೆ. ಈ ಅವಧಿಯಲ್ಲಿ 115 ಮಿಮೀ ಮಳೆಯಾಗುವ ಸಂಭವ ಇದೆ. ಅಲ್ಲದೆ, ಪ್ರತಿ ಗಂಟೆಗೆ 60 ಕಿ.ಮೀ.ವೇಗದಲ್ಲಿ ಗಾಳಿ ಬೀಸಲಿದ್ದು, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ಕೊಡಲಾಗಿದೆ.

ಬಾಗಲಕೋಟೆ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಜೂ.25ರಂದು ಆರೆಂಜ್​ ಅಲರ್ಟ್​​​​​ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಜೂ.26ರಿಂದ ಮುಂದಿನ 3 ದಿನ ಯೆಲ್ಲೋ ಅಲರ್ಟ್​ ಇರಲಿದೆ. ಧಾರವಾಡ, ಕೊಡಗಿನಲ್ಲಿ ಮುಂದಿನ 4 ದಿನ ಯೆಲ್ಲೋ ಅಲರ್ಟ್​​​​ ಇರಲಿದೆ. ಬೀದರ್​, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂ.ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಮಂಡ್ಯ, ಮೈಸೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರದಲ್ಲಿ ಮುಂದಿನ 4 ದಿನ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ವರ್ಷಧಾರೆಯಾಗಲಿದೆ.

ಬೆಂಗಳೂರಿನಲ್ಲಿ ಮುಂದಿನ 2 ದಿನ ಮೋಡ ಕವಿದ ವಾತಾವರಣ ಇರಲಿದ್ದು, ಗಂಟೆಗೆ 40-50 ಕಿ.ಮೀ.ವೇಗದಲ್ಲಿ ನಿರಂತರವಾಗಿ ಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28 ಮತ್ತು 21 ಡಿ.ಸೆ. ಇರಲಿದೆ.