ಜಿಲ್ಲೆ

ಜಲಾಶಯಗಳಲ್ಲಿ ಜಲಧಾರೆ: ಮಲೆನಾಡಲ್ಲಿ ವರುಣನ ಅಬ್ಬರ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಆರ್ಭಟ ಮುಂದುವರಿದಿದ್ದು, ಜಲಾಶಯಗಳು ಅವಧಿಗೂ ಮುನ್ನವೇ ಭರ್ತಿಯಾಗುವ ಸಾಧ್ಯತೆ ಇದೆ. ವಿವಿಧ ಜಿಲ್ಲೆಗಳಲ್ಲಿ ಇನ್ನೂ 5 ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಲೆನಾಡಲ್ಲಿ ಕೆಲ ದಿನ ಬಿಡುವು ನೀಡಿದ್ದ ವರುಣನ ಅಬ್ಬರ ಮತ್ತೆ ಬಿರುಸಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ 24 ಗಂಟೆಯಲ್ಲಿ 59 ಮಿ.ಮೀ. ಮಳೆಯಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ 19,038 ಕ್ಯೂಸೆಕ್ ನೀರು ಹರಿದುಬಂದಿದ್ದು ಡ್ಯಾನಿಂದ 4,128 ಕ್ಯೂ. ನೀರನ್ನು ನದಿಗೆ ಬಿಡಲಾಗುತ್ತಿದೆ. ಲಕ್ಕವಳ್ಳಿ ಭದ್ರಾ ಜಲಾಶಯದ ಮಟ್ಟ 149 ಅಡಿಗೆ ಏರಿಕೆಯಾಗಿದೆ. ಗಾಜನೂರು ತುಂಗಾ ಜಲಾಶಯಕ್ಕೆ 15,679 ಕ್ಯೂಸೆಕ್ ನೀರಿನ ಒಳಹರಿವಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಮಾಣಿ ಡ್ಯಾಂಗೆ 3,088 ಕ್ಯೂ., ಚಕ್ರಾಗೆ 1,231, ಸಾವೇಹಕ್ಲು ಡ್ಯಾಂಗೆ 1,125 ಕ್ಯೂ. ಒಳಹರಿವಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆ ರಭಸವಾಗಿದ್ದು, ಭದ್ರಾ ನದಿಯಲ್ಲಿ ಹೆಚ್ಚಿನ ನೀರು ಬಂದಿದ್ದರಿಂದ ಕಳಸ-ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಮುಳುಗುವ ಹಂತಕ್ಕೆ ಬಂದಿದೆ.

ಕರಾವಳಿಯಲ್ಲಿ ಬಿರುಸು

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಯೆಲ್ಲೋ ಅಲರ್ಟ್ ಮುಂದುವರಿದಿದೆ. ಸಮುದ್ರ ಪ್ರಕ್ಷುಬ್ಧವಾಗಿದ್ದು, ಮೀನುಗಾರಿಕೆಗೆ ತೆರಳಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕದ್ರಾ ಜಲಾಶಯಕ್ಕೆ 9375 ಕ್ಯೂ. ಒಳಹರಿವಿದೆ. 30.25 ಮೀ.(ಗರಿಷ್ಠ 34.50 ಮೀ.) ನೀರು ತುಂಬಿದೆ. 564 ಮೀಟರ್ ಗರಿಷ್ಠ ಸಂಗ್ರಹಣಾ ಸಾಮರ್ಥ್ಯವಿರುವ ಸೂಪಾ ಜಲಾಶಯ 533.15 ಮೀಟರ್ ಭರ್ತಿಯಾಗಿದೆ.

ಕೃಷ್ಣಾ ತಟದಲ್ಲಿ ಪ್ರವಾಹದ ಭೀತಿ

ನಾರಾಯಣಪುರ ಡ್ಯಾಂನಿಂದ ಕೃಷ್ಣಾ ನದಿಗೆ ನಿತ್ಯ 45 ಸಾವಿರ ಕ್ಯೂಸೆಕ್ ನೀರು ಹರಿಸಿದ್ದರಿಂದ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಹೂವಿನಹೆಡಗಿ ಗ್ರಾಮದ ಗಡ್ಡೆಗೂಳಿ ಬಸವೇಶ್ವರ ದೇಗುಲ ಮುಳುಗಡೆಯಾಗಿದೆ. ಕೊಪ್ಪರ ಹಾಗೂ ಗೂಗಲ್​ನ ಶ್ರೀ ಅಲ್ಲಮಪ್ರಭು ದೇವಸ್ಥಾನ ಸುತ್ತ ನೀರು ಆವರಿಸಿಕೊಂಡಿವೆ.

ಹಾರಂಗಿಯಿಂದ ನೀರು ಬಿಡುಗಡೆ

ಕೊಡಗು ಜಿಲ್ಲೆಯಲ್ಲೂ ವ್ಯಾಪಕ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಶುಕ್ರವಾರ ನದಿಗೆ 2500 ಕ್ಯೂ. ನೀರು ಹರಿಯಬಿಡಲಾಯಿತು. ಗರಿಷ್ಠ ಮಟ್ಟ 2859 ಅಡಿಗಳಿರುವ ಜಲಾಶಯದಲ್ಲಿ ಶುಕ್ರವಾರ ಮುಂಜಾನೆ ವೇಳೆಗೆ 2853 ಅಡಿ ನೀರು ಸಂಗ್ರಹವಾಗಿತ್ತು. ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲೂ ನೀರಿನ ಪ್ರಮಾಣ ಅಧಿಕವಾಗುತ್ತಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿರುವುದರಿಂದ ದಕ್ಷಿಣ ಕೊಡಗಿನ ಭಾಗದ ಕಕ್ಕಟ್ಟ್ ಪೊಳೆ ನದಿ ತುಂಬಿ ಹರಿಯುತ್ತಿದೆ. ಅಲ್ಲದೆ, ಲಕ್ಷ್ಮಣತೀರ್ಥ, ರಾಮತೀರ್ಥ ನದಿಯಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ.