ಬಾಗಲಕೋಟೆ : ‘‘ಯಪ್ಪಾ… ನನಗೆ ಹಿಂದೆ, ಮುಂದೆ ಯಾರು ಇಲ್ಲ.! ನಾನೊಬ್ಬಳೆ ಇದ್ದೇನೆ. ಬಿಪಿ ಇದೆ. ಕೈ ಮುಗಿತೇನಿ ನಿಲ್ಲಲು ಆಗುತ್ತಿಲ್ಲ. ಮೂರು ದಿನವಾದರೂ ಎರಡು ಸಾವಿರ ರೂ. ಯೋಜನೆಗೆ ನನ್ನ ಕಾರ್ಡ್ ನೋಂದಣಿ ಆಗುತ್ತಿಲ್ಲ. ಬ್ಯಾಂಕ್ ಲಿಂಕ್ ಆಗಿಲ್ಲ ಅಂತಾರೆ. ಅಲ್ಲಿಗೆ ಹೋದರೆ ಮಾಡಿದ್ದೇವೆ ಅಂತಾರೆ. ಊಟ, ಉಪಾಹಾರ ಇಲ್ಲದೇ ತಲೆ ತಿರುಗುತ್ತಿದೆ…’’
ಇದು ಬಾಗಲಕೋಟೆ ಹಳೇ ತಹಸೀಲ್ದಾರ್ ಕಚೇರಿಯಲ್ಲಿ ನಗರಸಭೆಯಿಂದ ತೆರೆದಿರುವ ಗೃಹಲಕ್ಷ್ಮೀ ನೋಂದಣಿ ಕೇಂದ್ರದಲ್ಲಿ ಶುಕ್ರವಾರ ಬಿಪಿ, ಶುಗರ್‌ನಿಂದ ಬಳಲುತ್ತಿರುವ ವೃದ್ಧೆ ಕೃಷ್ಣಾಬಾಯಿ ಉಬಾಳೆ ತಮ್ಮ ಸಂಕಟವನ್ನು ‘ವಿಜಯವಾಣಿ’ ಎದುರು ತೋಡಿಕೊಂಡ ಪರಿ…!ಇದು ಬರೀ ಕೃಷ್ಣಾಬಾಯಿ ಒಬ್ಬರ ನೋವಲ್ಲ. ಗೃಹಲಕ್ಷ್ಮೀ ನೋಂದಣಿಗೆ ಸರ್ವರ್ ಪ್ರಾಬ್ಲಮ್, ನೋಂದಣಿ ಆದರೂ ಬಾರದ ಸ್ವೀಕೃತಿ ಪತ್ರ, ಕೆವೈಸಿ ಇಲ್ಲದೇ ಅನೇಕ ಮಹಿಳೆಯರು ಪರದಾಡುತ್ತಿದ್ದಾರೆ. ಅದರಲ್ಲಿ ಮಧ್ಯ ವಯಸ್ಕರು ಹಾಗೂ ವೃದ್ಧೆಯರು ವಿಶೇಷವಾಗಿ ಬಿಪಿ, ಶುಗರ್ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದು, ಸಮಯಕ್ಕೆ ಸರಿಯಾಗಿ ಊಟ, ಉಪಾಹಾರ ಇಲ್ಲದೇ ಪರದಾಡುತ್ತಿದ್ದಾರೆ.
ವೃದ್ಧೆ ಕೃಷ್ಣಾಬಾಯಿ ಉಬಾಳೆ ಅವರು ಕಳೆದ ಮೂರು ದಿನಗಳಿಂದ ಗೃಹಲಕ್ಷ್ಮೀ ನೋಂದಣಿ ಕೇಂದ್ರ ಹಾಗೂ ಬ್ಯಾಂಕ್‌ಗೆ ಅಲೆದಾಡಿ ಅಲೆದಾಡು ಸಂಪೂರ್ಣ ಸುಸ್ತಾಗಿದ್ದು, ಬಿಪಿ ಹೆಚ್ಚಳವಾಗಿ ದಾರಿ ಮಧ್ಯ ಕುಸಿದು ಬಿದ್ದಿದ್ದು, ಮತ್ತೆ ಕೇಂದ್ರಕ್ಕೆ ಬಂದಿದ್ದರು.
ಇದನ್ನೂ ಓದಿ: ಮಳೆಯಲ್ಲೇ ಗೃಹಲಕ್ಷ್ಮೀ ಅರ್ಜಿಗೆ ಕಾದುನಿಂತ ಮಹಿಳೆಯರು
ಅಕ್ಕಪಕ್ಕ ನಿಂತಿದ್ದ ಅನೇಕ ಮಹಿಳೆಯರು ನಮ್ಮದು ಸ್ವಲ್ಪ ತಡವಾದರೂ ಚಿಂತೆ ಇಲ್ಲ. ಆ ಅಜ್ಜಿಯ ಕೆಲಸ ಮೊದಲು ಮಾಡಿ ಎಂದು ಕೇಂದ್ರದವರನ್ನು ಮನವಿ ಸಹ ಮಾಡಿದರು. ಆದರೂ ಸಹ ನೋಂದಣಿ ಮಾತ್ರ ಆಗದೇ ಕೃಷ್ಣಾಬಾಯಿ ಮತ್ತೆ ಕಣ್ಣೀರು ಹಾಕುತ್ತಲೇ ಮನೆಯತ್ತ ತೆರಳಿದರು.
ಇನ್ನು ಕೇಂದ್ರಗಳಲ್ಲಿ ನೋಂದಣಿ ಆರಂಭದ ದಿನದಿಂದಲೂ ಸರ್ವರ್ ಸಮಸ್ಯೆ ಇನ್ನೂ ಸಹ ಬಗೆ ಹರಿದಿಲ್ಲ. ಮೊಬೈಲ್‌ನಲ್ಲಿ ನೋಂದಣಿ ಮಾಡುತ್ತಿದ್ದರಾದರೂ ಕೇಂದ್ರಕ್ಕೆ ಬರುವ ಮಹಿಳೆಯರ ಸಂಖ್ಯೆ ಹೆಚ್ಚಿದ್ದು, ಒಂದೇ ದಿನದಲ್ಲಿ ನೋಂದಣಿ ಆಯಿತು ಎಂದು ಖುಷಿಯಿಂದ ಮನೆಗೆ ಹೆಜ್ಜೆ ಹಾಕುವವರ ಸಂಖ್ಯೆ ಬಲು ಅಪರೂಪ. ಯಾರನ್ನೇ ಕೇಳಿದರೂ ಮೂರು ದಿನ, ನಾಲ್ಕು ದಿನಗಳಿಂದ ಅಲೆದಾಡುತ್ತಿದ್ದೇವೆ ಎನ್ನುವ ಉತ್ತರವೇ ಕೇಳು ಬರುತ್ತಿದೆ.
ಮಹಿಳೆಯರು ಸರದಿಯಲ್ಲಿ ನಿಂತು, ನಿತ್ಯ ಅಲೆದಾಡು ಸಾಕು ಸಾಕಾಗಿ ಕೆಲವರು ತಮ್ಮ ಮನೆಯಲ್ಲಿನ ಪುರುಷರನ್ನು ಸರದಿಯಲ್ಲಿ ನಿಲ್ಲಿಸುತ್ತಿದ್ದಾರೆ. ಇಡೀ ದಿನ ಕೆಲಸ ಕಾರ್ಯ ಬಿಟ್ಟು ಅವರು ಸಹ ಕೇಂದ್ರದಲ್ಲಿ ನೋಂದಣಿ ಮಾಡಿಸಲು ಪರದಾಡುತ್ತಿದ್ದಾರೆ. ಸಿಬ್ಬಂದಿ ಜೊತೆ ವಾದಕ್ಕೂ ಇಳಿಯುತ್ತಿದ್ದಾರೆ. ಹೀಗಾಗಿ ಪುರುಷರು ಬರಬೇಡಿ ಎಂದು ಕೇಂದ್ರದ ಸಿಬ್ಬಂದಿ ಹೇಳುತ್ತಿರುವುದು ಕಂಡು ಬಂದಿತು.