ಗಂಗೊಳ್ಳಿ: ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿರುವ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂಬ ಅನೇಕ ವರ್ಷಗಳ ಹಿಂದಿನ ಬೇಡಿಕೆ ನನೆಗುದಿಗೆ ಬಿದ್ದಿದೆ.
ಗಂಗೊಳ್ಳಿ, ಹೆವ್ಮಾಡಿ, ಕಟ್‌ಬೆಲ್ತೂರು ಹಾಗೂ ತಲ್ಲೂರು ಗ್ರಾ.ಪಂ.ಗಳನ್ನೊಳಗೊಂಡ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಟ್ಟು 23 ಹುದ್ದೆಗಳಿದ್ದು, ಇದರಲ್ಲಿ ಕೇವಲ 6 ಹುದ್ದೆ ವಾತ್ರ ಭರ್ತಿಯಾಗಿದ್ದು, 17 ಹುದ್ದೆ ಖಾಲಿ ಇದೆ. ಆರೋಗ್ಯ ಕೇಂದ್ರ ವ್ಯಾಪ್ತಿಯ ಉಪಕೇಂದ್ರಗಳಿಗೆ ನೇಮಕಗೊಂಡಿದ್ದ 6 ಮಂದಿ ಸಿಎಚ್‌ಒ ಪೈಕಿ ನಾಲ್ವರು ವಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಗಂಗೊಳ್ಳಿ ಸದಾ ಚಟುವಟಿಕೆಯಿಂದ ಕೂಡಿರುವ ಮೀನುಗಾರಿಕಾ ಬಂದರು ಪ್ರದೇಶವಾಗಿದೆ. ಪ್ರತಿನಿತ್ಯ ಸಹಸ್ರಾರು ಮಂದಿ ಮೀನುಗಾರರು, ಕಾರ್ಮಿಕರು ಗಂಗೊಳ್ಳಿಗೆ ಆಗಮಿಸುತ್ತಿದ್ದಾರೆ. ಈ ಆಸ್ಪತ್ರೆಯು ತಾಲೂಕು ಕೇಂದ್ರದಿಂದ 20 ಕಿ.ಮೀ. ದೂರವಿದೆ. ಯಾರಿಗಾದರೂ ತುರ್ತು ಅನಾರೋಗ್ಯ ಉಂಟಾದರೆ ಕುಂದಾಪುರಕ್ಕೆ ತೆರಳಬೇಕು. ಅದಕ್ಕಾಗಿ ಗ್ರಾಮೀಣ ಭಾಗದ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು ಎನ್ನುವ ಬೇಡಿಕೆ ಅನೇಕ ವರ್ಷಗಳಿಂದ ಇದೆ. ಬಂದರು ಪ್ರದೇಶವಾಗಿರುವ ಗಂಗೊಳ್ಳಿಯಲ್ಲಿ ಮೀನುಗಾರರೇ ಹೆಚ್ಚಿದ್ದು, ಇಲ್ಲಿನ ಜನರ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಸ್ತುತ ಖಾಲಿ ಇರುವ ಹುದ್ದೆಗಳನ್ನು ಭರ್ತಿ ವಾಡಿ ಜನರಿಗೆ ಆರೋಗ್ಯ ಸೇವೆ ನೀಡುವಲ್ಲಿ ಕ್ರಮಕೈಗೊಳ್ಳಬೇಕಾಗಿದೆ.
ಸದ್ಯ ಇಲ್ಲಿಗೆ 100ಕ್ಕೂ ಅಧಿಕ ಮಂದಿ ರೋಗಿಗಳು ಚಿಕಿತ್ಸೆ ಹಾಗೂ ತಪಾಸಣೆ ವಾಡಿಸಿಕೊಳ್ಳಲು ಬರುತ್ತಿದ್ದಾರೆ. ವೈದ್ಯಾಧಿಕಾರಿಗಳಿದ್ದರೂ ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳಿಂದಾಗಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ.
15 ವರ್ಷಗಳ ಹಿಂದೆ ಗಂಗೊಳ್ಳಿಗೆ ಮಂಜೂರಾಗಿದ್ದ ಸಮುದಾಯ ಆರೋಗ್ಯ ಕೇಂದ್ರವು ಕಟ್ಟಡ ನಿರ್ವಾಣಕ್ಕೆ ಸೂಕ್ತ ಜಾಗದ ಸಮಸ್ಯೆಯಿಂದ ಕೈ ತಪ್ಪಿ, ಬೇರೆಡೆ ಹೋಗಿತ್ತು. ಈ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 4 ಗ್ರಾಮಗಳ 30 ಸಾವಿರ ಜನಸಂಖ್ಯೆಯಿದ್ದು, 7 ಉಪ ಆರೋಗ್ಯ ಕೇಂದ್ರಗಳಿವೆ. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಲು ಎಲ್ಲ ಅರ್ಹತೆ ಹೊಂದಿದೆ.
ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಡಿಯಲ್ಲಿ ಒಟ್ಟು 7 ಉಪ ಕೇಂದ್ರಗಳು ಬರುತ್ತವೆ. ಗಂಗೊಳ್ಳಿ ಎ ಮತ್ತು ಬಿ, ಕಟ್‌ಬೆಲ್ತೂರು, ತಲ್ಲೂರು, ಹೆವ್ಮಾಡಿ, ಉಪ್ಪಿನಕುದ್ರು ಹಾಗೂ ದೇವಲ್ಕುಂದ ಈ ಉಪ ಕೇಂದ್ರಗಳಾಗಿವೆ.
ಒಂದು ಫಾರ್ವಾಸಿಸ್ಟ್, ಒಂದು ಬ್ಲಾಕ್ ಹೆಲ್ತ್ ಎಜುಕೇಟರ್, 1 ಎಫ್‌ಡಿಸಿ, ಐವರು ಪುರುಷ ಜೂನಿಯರ್ ಹೆಲ್ತ್ ವರ್ಕರ್, ಒಬ್ಬ ಸೀನಿಯರ್ ಪುರುಷ ಹೆಲ್ತ್ ವರ್ಕರ್, ಒಬ್ಬ ಪ್ಯಾರಾ ಮೆಡಿಕಲ್ ವರ್ಕರ್, 5 ಪ್ರಾಥಮಿಕ ಆರೋಗ್ಯ ಅಧಿಕಾರಿ ಹುದ್ದೆ ಖಾಲಿಯಾಗಿದೆ. ವೈದ್ಯಾಧಿಕಾರಿ, ಸ್ಟಾಫ್ ನರ್ಸ್, ಹೊರಗುತ್ತಿಗೆಯಡಿ ಒಬ್ಬಳು ಲ್ಯಾಬ್ ಟೆಕ್ನಿಶಿಯನ್, ಇಬ್ಬರು ಗ್ರೂಪ್ ಡಿ ನೌಕರರು, ಇಬ್ಬರು ಪ್ರಾಥಮಿಕ ಆರೋಗ್ಯ ಅಧಿಕಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹತ್ತಾರು ಊರುಗಳ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದು, ಪ್ರತಿನಿತ್ಯ ನೂರಾರು ಮಂದಿ ಆರೋಗ್ಯ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಸಿಬ್ಬಂದಿ ಕೊರತೆಯಿಂದ ಸಮರ್ಪಕ ಸೇವೆಗೆ ತೊಡಕಾಗಿದೆ. 17 ಹುದ್ದೆಗಳು ಖಾಲಿಯಿದ್ದು ಈ ಬಗ್ಗೆ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಕೂಡಲೇ ಭರ್ತಿ ವಾಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೇಗೇರಿಸಿ ದಿನದ 24 ತಾಸು ಕಾರ್ಯ ನಿರ್ವಹಿಸುವಂತೆ ವಾಡಬೇಕು. ಬಿ.ಸದಾನಂದ ಶೆಣೈ, ಗಂಗೊಳ್ಳಿ ವಾಜಿ ಮಂಡಲ ಪ್ರಧಾನ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆಯಿಂದ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಆಸ್ಪತ್ರೆಯಲ್ಲಿ ಖಾಲಿಯಿರುವ ಹುದ್ದೆ ಭರ್ತಿ ವಾಡುವಂತೆ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮನವಿ ವಾಡಲಾಗಿದೆ. ಡಾ.ಅಮಿತಾ, ವೈದ್ಯಾಧಿಕಾರಿ, ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ