ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಹೃದಯಾಘಾತಕ್ಕೆ ಒತ್ತಡದ ಜೀವನ ಶೈಲಿ, ಅನಿಯಮಿತ ನಿದ್ದೆ ಮತ್ತು ಆಹಾರ ಸೇವನೆ ಹಾಗೂ ದೈಹಿಕ ವ್ಯಾಯಾಮಗಳಿಲ್ಲದಿರುವುದು ಕಾರಣವಾಗಿದ್ದು ಇದನ್ನು ಸರಿಪಡಿಸಿಕೊಳ್ಳಬೇಕು. ಭಾರತೀಯರಲ್ಲಿ ಶೇ.30ರಷ್ಟು ಹೃದಯ ರೋಗಿಗಳು 40ರ ವಯೋಮಿತಿಯಲ್ಲಿರುವುದು ಕಂಡುಬರುತ್ತಿರುವುದು ಆತಂಕಕಾರಿ ಎಂದು ಎ.ಜೆ. ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖಸ್ಥ ಡಾ.ಬಿ.ಮಂಜುನಾಥ ಹೇಳಿದರು.
ವಿಶ್ವ ಹೃದಯ ದಿನದ ಅಂಗವಾಗಿ ಮೂಡುಬಿದಿರೆಯ ಡಾಕ್ಟರ್ ಅಸೊಸಿಯೇಶನ್, ಎ.ಜೆ. ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್‌ಟೌನ್ ಸಹಯೋಗದಲ್ಲಿ ವಿವಿಧ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಭಾನುವಾರ ಹೃದ್ರೋಗದ ಬಗ್ಗೆ ಜಾಗೃತಿಗಾಗಿ ನಡಿಗೆ(ವಾಕ್‌ಥಾನ್) ಪ್ರಯುಕ್ತ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ರವಿಪ್ರಸಾದ್ ಉಪಾಧ್ಯಾಯ, ಆಲಂಗಾರು ಲಯನ್ಸ್ ಕ್ಲಬ್ ಅಧ್ಯಕ್ಷೆ ಲೀನಾ ಜೆಸಿಂತ ಡಿಮೆಲ್ಲೋ, ಮೂಡುಬಿದಿರೆ ಲಯನ್ಸ್ ಕ್ಲಬ್ ಅಧ್ಯಕ್ಷ ಬೋನವೆಂಚರ್ ಮಿನೇಜಸ್, ಇನ್ನರ್ ವೀಲ್ ಕ್ಲಬ್ ಸದಸ್ಯೆ ಶಾಲಿನಿ ಹರೀಶ್ ನಾಯಕ್, ಆಳ್ವಾಸ್ ನರ್ಸಿಂಗ್ ಕಾಲೇಜಿನ ಎನ್‌ಎಸ್‌ಎಸ್ ಸಂಯೋಜಕ ಶಿವಾನಂದ, ರೋಟರಿ ಕ್ಲಬ್ ಟೆಂಪಲ್‌ಟೌನ್ ಅಧ್ಯಕ್ಷ ಪೂರ್ಣಚಂದ್ರ ಜೈನ್, ಕಾರ್ಯದರ್ಶಿ ಹರೀಶ್ ಎಂ.ಕೆ. ಮತ್ತಿತರರಿದ್ದರು.
ಡಾಕ್ಟರ್ ಅಸೋಸಿಯೇಶನ್ ಅಧ್ಯಕ್ಷ ಡಾ.ಮಹಾವೀರ ಜೈನ್ ಸ್ವಾಗತಿಸಿದರು. ಹರೀಶ್ ಕಾಪಿಕಾಡ್ ಮತ್ತು ಡಾ.ಪ್ರಣಮ್ಯ ಜೈನ್ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲಬ್ ಟೆಂಪಲ್ ಟೌನ್ ಅಧ್ಯಕ್ಷ ಪೂರ್ಣಚಂದ್ರ ಜೈನ್ ವಂದಿಸಿದರು.
ಹೃದಯಾಘಾತ ಉಂಟಾದ ಸಂದರ್ಭ ಹೇಗೆ ಸ್ಪಂದಿಸಬಹುದು ಎಂಬ ಬಗ್ಗೆ ಪೊಲೀಸ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ರೋಟರಿ ಶಾಲೆಯಿಂದ ಕನ್ನಡ ಭವನದವರೆಗೆ ನಡೆದ ಜಾಗೃತಿ ಜಾಥಾವನ್ನು ಸಮಾಜ ಮಂದಿರ ಸಭಾದ ಅಧ್ಯಕ್ಷ ಅಭಯಚಂದ್ರ ಜೈನ್ ಉದ್ಘಾಟಿಸಿದರು. ಜಾಥಾದಲ್ಲಿ ರೋಟರಿ ಕ್ಲಬ್, ರೋಟರಿ ಮಿಡ್‌ಟೌನ್, ಆಳ್ವಾಸ್ ನರ್ಸಿಂಗ್ ಕಾಲೇಜು, ಲಯನ್ಸ್ ಕ್ಲಬ್, ಜೇಸಿಸ್, ರೋಟರ‌್ಯಾಕ್ಟ್, ಲಿಯೋ ಕ್ಲಬ್‌ಗಳ 300ಕ್ಕೂ ಅಧಿಕ ಸದಸ್ಯರು ಭಾಗವಹಿಸಿದ್ದರು.