ಕಡಬ: ಬಿಡುವುದಿಲ್ಲದ ಜೀವನಪದ್ಧತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟವಾಗುತ್ತಿರುವ ಕಾಲಘಟ್ಟದಲ್ಲಿ ನಮ್ಮ ಬಳಿಗೆ ಬಂದ ಆರೋಗ್ಯ ಶಿಬಿರ ಸದುಪಯೋಗಪಡಿಸಿಕೊಳ್ಳಬೇಕು. ಸಿ.ಎ. ಬ್ಯಾಂಕ್ ಆರ್ಥಿಕ ವ್ಯವಹಾರಕ್ಕೆ ಸೀಮಿತವಾಗದೆ ಸದಸ್ಯರ ಆರೋಗ್ಯ ಕಾಪಾಡುವುದರ ಮೂಲಕ ಸಾಮಾಜಿಕ ಬದ್ಧತೆ ತೋರ್ಪಡಿಸಿರುವುದು ಮಾದರಿ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನದ ಸವಿ ನೆನಪಿಗಾಗಿ, ಮಂಗಳೂರು ಎ.ಜೆ. ವೈದ್ಯಕೀಯ ಮಹಾ ವಿದ್ಯಾಲಯ ಆಸ್ಪತ್ರೆ ಸಹಭಾಗಿತ್ವದಲ್ಲಿ, ಭಾನುವಾರ ಕಾಣಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಂಘದ ಕಾರ್ಯವ್ಯಾಪ್ತಿಯ ಸದಸ್ಯರಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಚಾರ್ವಾಕ ಪ್ರಾಥಮಿಕ ಕೃಷಿ ಸಹಕಾರಿ ಸಂಘ ಹಿರಿಯರ ಪರಿಶ್ರಮದಿಂದ ಉತ್ತಮವಾಗಿ ಬೆಳೆದು ಬಂದಿದೆ. ಸಂಘದ ಪ್ರತಿಯೊಂದು ಕಾರ್ಯದಲ್ಲಿ ಸದಸ್ಯರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಮುನ್ನಡೆಸಬೇಕು. ಸಹಕಾರಿ ತತ್ವದಡಿ ಕಾರ್ಯಾಚರಿಸಿ ಶತಮಾನ ಪೂರೈಸಿದ ಬ್ಯಾಂಕಿನ ಸಾಧನೆ ಎಲ್ಲರಿಗೂ ಪ್ರೇರಣೆ ಎಂದರು.
ಕಾಣಿಯೂರು ಗ್ರಾಪಂ ಅಧ್ಯಕ್ಷ ವಿಶ್ವನಾಥ ಕೊಪ್ಪ, ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು,
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ವೈದ್ಯ ಡಾ.ಉದಯ ಕುಮಾರ್, ಕಾಣಿಯೂರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್ವರ ಗೌಡ ಅನಿಲ, ಸಿ.ಜೆ.ಚಂದ್ರಕಲಾ ಅರುವಗುತ್ತು ಉಪಸ್ಥಿತರಿದ್ದರು. ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ವಂದಿಸಿದರು. ಧನಂಜಯ ಕೇನಾಜೆ ಕಾರ್ಯಕ್ರಮ ನಿರೂಪಿಸಿದರು.