ಕೋಟ: ಯಕ್ಷಗಾನ ಕಲಾವಿದರು ದೈಹಿಕ ಶ್ರಮದ ಮೂಲಕ ಕೆಲಸ ಮಾಡುವವರು. ಹೀಗಾಗಿ ಕಲಾವಿದರಿಗೆ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ ಮತ್ತು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಿ ಸಮಸ್ಯೆಗಳಿದ್ದರೆ ಪರಿಹರಿಸಿಕೊಳ್ಳಬೇಕು ಎಂದು ಸಿಂಗಾಪುರ ರಾಷ್ಟ್ರೀಯ ವಿಶ್ವವಿದ್ಯಾಲಯದ ಪ್ರಾದ್ಯಾಪಕ ಡಾ.ಪ್ರಕಾಶ್ ಹಂದೆ ಹೇಳಿದರು.
ಗುಂಡ್ಮಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ ಆಶ್ರಯದಲ್ಲಿ ಯಕ್ಷಗಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಡುಪಿ ಎಂ.ಜಿ.ಎಂ ಕಾಲೇಜು ಪ್ರಾಶುಂಪಾಲ ಲಕ್ಷ್ಮೀನಾರಾಯಣ ಕಾರಂತ ಶುಭ ಹಾರೈಸಿದರು. ಹಿರಿಯ ಯಕ್ಷಗಾನ ಭಾಗವತ ಹೆರೆಂಜಾಲು ಗೋಪಾಲ ಗಾಣಿಗ ಅವರಿಗೆ ಪ್ರಾಚಾರ್ಯ ನಾರಾಯಣಪ್ಪ ಉಪ್ಪೂರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೋಟ ವಿವೇಕ ವಿದ್ಯಾಸಂಸ್ಥೆಯ ಪ್ರಾಶುಂಪಾಲ ಜಗದೀಶ ನಾವಡ, ಉಪ್ಪೂರರ ಪುತ್ರ ದಿನೇಶ ಉಪ್ಪೂರ, ಬ್ರಹ್ಮಾವರ ಸರ್ಕಾರಿ ಪ.ಪೂ.ಕಾಲೇಜು ಪ್ರಾಶುಂಪಾಲ ರವೀಂದ್ರ ಉಪಾಧ್ಯ, ಕಲಾಕೇಂದ್ರದ ಸಲಹಾ ಸಮಿತಿ ಸದಸ್ಯ ವಾಸುದೇವ ಕಾರಂತ ಇದ್ದರು.
ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿದರು. ಮಹಾಲಕ್ಷ್ಮೀ ಸೋಮಯಾಜಿ, ಕ.ಸಾ.ಪ ಬ್ರಹ್ಮಾವರ ತಾಲೂಕು ಅಧ್ಯಕ್ಷ ರಾಮಚಂದ್ರ ಐತಾಳ ಕಾರ್ಯಕ್ರಮ ನಿರೂಪಿಸಿದರು.
ಛಾಯಾ ತರಂಗಿಣಿ ಸಂಗೀತ ಶಾಲೆ ಕೋಟ ಅವರಿಂದ ಗಾನ ವೈಭವ, ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವ ರಂಗ ಪ್ರದರ್ಶನ ಹಾಗೂ ಹಿರಿಯ ಕಲಾವಿದರಿಂದ ಪ್ರದ್ಯುಮ್ನ ವಿಜಯ ಯಕ್ಷಗಾನ ಪ್ರದರ್ಶನ ನಡೆಯಿತು.