ಹಲ್ಲೆಗೊಳಗಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಭ್ರಮಿತ್ 
ಜಿಲ್ಲೆ

ಪಂಚೋಡಿಯಲ್ಲಿ ತಲವಾರು ಜಳಪಿಸಿ ಹೊಡೆದಾಟ : ಇಬ್ಬರ ಬಂಧನ, 7 ಮಂದಿಯ ವಿರುದ್ಧ ಕೇಸ್

ಇಂದಿರಾ ಎನ್ ಕೆ

ಪುತ್ತೂರು ಗ್ರಾಮಾಂತರ : ಸಾರ್ವಜನಿಕ ಸ್ಥಳದಲ್ಲಿ ತಲವಾರು ಜಳಪಿಸಿಕೊಂಡು ಹೊಡೆದಾಡಿ ಶಾಂತಿಭಂಗವನ್ನುಂಟು ಮಾಡಿದ ಘಟನೆ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪಂಚೋಡಿ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದ್ದು, ಘಟನೆಗೆ ಸಂಬಂಧಿಸಿ ಸಂಪ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಭಾನುವಾರ ರಾತ್ರಿ ಪಂಚೋಡಿಯಲ್ಲಿ ರಾಜೇಶ್ ಪಂಚೋಡಿ, ಪ್ರವೀಶ್ ನಾಯರ್, ರಾಕೇಶ್ ಪಂಚೋಡಿ, ಜಯರಾಜ್, ಪ್ರಜ್ವಲ್ ಮಡ್ಯಳಮಜಲು, ಸಂಜನ್ ರೈ ಮತ್ತಿತರರು ಪರಸ್ಪರ ಬೈದಾಡಿಕೊಂಡು ಹೊಡೆದಾಟ ನಡೆಸಿದ್ದು, ರಾಕೇಶ್ ಪಂಚೋಡಿ ಎಂಬಾತ ತಲವಾರಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ.

ಸ್ಥಳಕ್ಕೆ ತೆರಳಿದ ಸಂಪ್ಯ ಎಸ್‌ಐ ಜಂಬೂರಾಜ್ ಬಿ.ಮಹಾಜನ್ ನೇತೃತ್ವದ ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ರಾಕೇಶ್ ಪಂಚೋಡಿ ಕೈಯಲ್ಲಿದ್ದ ತಲ್ವಾರನ್ನು ಕಸಿದುಕೊಂಡು, ರಾಜೇಶ್ ಹಾಗೂ ಸಂಜನ್ ರೈಯನ್ನು ವಶಕ್ಕೆ ತೆಗೆದುಕೊಂಡಿದ್ದು, ಉಳಿದವರು ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ದೌರ್ಜನ್ಯದ ಆರೋಪ

ಪಂಚೋಡಿಯಲ್ಲಿ ಭಾನುವಾರ ರಾತ್ರಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ತಪ್ಪು ಮಾಹಿತಿಯ ಮೇಲೆ ಸಂಪ್ಯ ಠಾಣೆಯ ಪೊಲೀಸರು ಭಾನುವಾರ ರಾತ್ರಿ ಮನೆಗೆ ನುಗ್ಗಿ ತನ್ನ ಮೇಲೆ ವಿನಾಕಾರಣ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಯುವಕ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ನೆಟ್ಟಣಿಗೆ ಮುಡ್ನೂರು ಗ್ರಾಮದ ಪಂಚೋಡಿ ನಿವಾಸಿ, ಪುತ್ತೂರಿನ ಕಂಪನಿಯೊಂದರಲ್ಲಿ ಎಸಿ ಟೆಕ್ನಿಷಿಯನ್ ಆಗಿರುವ ಭ್ರಮಿತ್ ಹಲ್ಲೆಗೊಳಗಾದವರು. ಅವರ ಎಡಗೈಗೆ ಗಾಯವಾಗಿದೆ. ರಾತ್ರಿ ಮನೆಯಲ್ಲಿ ಮಲಗಿದ್ದ ನಾಲ್ವರು ಪೊಲೀಸರು ಬಾಗಿಲು ಬಡಿದು ಲೈಟ್ ಹಾಕಿದರು. ಈ ಬಗ್ಗೆ ಪ್ರಶ್ನಿಸಿದಾಗ ಮನೆಯೊಳಗೆ ಯಾರೂ ಇಲ್ಲವಾ ಎಂದು ಕೇಳಿದರು. ಯಾರೂ ಇಲ್ಲ, ನಿಮಗೆ ಯಾರು ಬೇಕು ಎಂದು ನಾನು ಕೇಳಿದಾಗ ಮನೆಯೊಳಗೆ ನಿನ್ನ ಅಪ್ಪನಿಲ್ವಾ ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ಬೈದ ಪೊಲೀಸರು ಕಾಲರ್ ಹಿಡಿದು ಹೊರಗೆ ಎಳೆದುಕೊಂಡು ಹೋಗಿ ಲಾಠಿಯಿಂದ ಹೊಡೆದಿದ್ದಾರೆ. ಬಳಿಕ ಗಲಾಟೆ ನಡೆದ ಸ್ಥಳದಲ್ಲಿ ನಿಲ್ಲಿಸಿದ್ದ ಪೊಲೀಸ್ ವಾಹನದ ಬಳಿಗೆ ಕರೆದೊಯ್ದರು. ಅಲ್ಲಿದ್ದ ಎಸ್‌ಐ ಅವರಲ್ಲಿ ನನಗೆ ಗಲಾಟೆಯ ವಿಷಯ ಗೊತ್ತಿಲ್ಲ, ನಾನೇನು ತಪ್ಪು ಮಾಡಿದ್ದೇನೆ ಎಂದು ಕೇಳಿದಾಗ ಅವರು, ನೀನು ಗಲಾಟೆಯಲ್ಲಿ ಇರಲಿಲ್ಲವೇ, ಹಾಗಾದರೆ ಹೋಗು ಎಂದು ಮನೆಗೆ ಕಳುಹಿಸಿದ್ದಾರೆ. ಪೊಲೀಸರ ಲಾಠಿ ಏಟಿನಿಂದ ನನ್ನ ಎಡಗೈಗೆ ಗಾಯವಾಗಿದೆ ಎಂದು ಭ್ರಮಿತ್ ಆರೋಪಿಸಿದ್ದಾರೆ.