ಕೊಡಗು: ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಂದಾ ಗ್ರಾಮದ ಕುಂದಬೆಟ್ಟದಲ್ಲಿರುವ ಮಹಾದೇವರ ದೇವಾಲಯಕ್ಕೆ ಕಿಡಿಗೇಡಿಗಳು ಹಾನಿ ಮಾಡಿದ ಘಟನೆ ನಡೆದಿದ್ದು, ಪ್ರವಾಸಿಗರಿಗೆ ನಿರ್ಬಂಧ ಹೇರುವಂತೆ ಸ್ಥಳೀಯರು ಪೊಲೀಸರನ್ನು ಆಗ್ರಹಿಸಿದ್ದಾರೆ.
ಪಾಂಡವರು ಅಜ್ಞಾತವಾಸದಲ್ಲಿದ್ದ ಸಂದರ್ಭದಲ್ಲಿ ಈ ಬೆಟ್ಟದ ಮೇಲೆ ಮಹಾದೇವರ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆಂದು ಹೇಳಲಾಗುತ್ತದೆ. ಕುಂದಬೆಟ್ಟದ ಮೇಲಿನ ಈ ದೇವಾಲಯದ ಮೇಲ್ಭಾಗದಲ್ಲಿದ್ದ ಬಸವನ ಮೂರ್ತಿಯ ತಲೆಯ ಭಾಗವನ್ನು ದುಷ್ಕರ್ಮಿಗಳು ಉರುಳಿಸಿದ್ದಾರೆ.
ಸ್ಥಳಕ್ಕೆ ಗೋಣಿಕೊಪ್ಪಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಾಲಯವಿರುವ ಸ್ಥಳಕ್ಕೆ ಪ್ರವಾಸಿಗರು ಆಗಮಿಸಿ ಮೋಜು-ಮಸ್ತಿ ಮಾಡುತ್ತಾರೆ. ಆದ್ದರಿಂದ ಪ್ರವಾಸಿಗರು ದೇವಾಲಯವಿರುವ ಸ್ಥಳಕ್ಕೆ ಆಗಮಿಸದಂತೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.