ಬೆಂಗಳೂರು: ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಪ್ರತಿವಾದಿಗಳು ಅಡ್ಡಿಪಡಿಸದಂತೆ ನ್ಯಾಯಾಲಯ ನೀಡಿದ್ದ, ಆದೇಶವನ್ನು ಅನುಷ್ಠಾನಕ್ಕೆ ತರಲು 1.5 ಲಕ್ಷ ರೂಪಾಯಿ ಲಂಚವನ್ನು ಸ್ವೀಕರಿಸುತ್ತಿದ್ದ ಪೀಣ್ಯ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ಮಾರೇಗೌಡ ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಾಗಸಂದ್ರ ಬಳಿ ಇರುವ ನೆಲಗೆದರನಹಳ್ಳಿಯ ನಿವಾಸಿ ಗವಿರಾಜ್ ಗೌಡ ಎಂಬುವವರು ಬಿಬಿಎಂಪಿ ವಾರ್ಡ್ ನಂ 40ರ ವ್ಯಾಪ್ತಿಯಲ್ಲಿ ಬರುವ ಕರಿವೋಬನಹಳ್ಳಿಯಲ್ಲಿದ್ದ 20*40 ಚದರ ಅಡಿ ನಿವೇಶನವನ್ನು ಟಿ.ದಾಸರಹಳ್ಳಿಯ ವಿದ್ಯಾನಗರದ ನಿವಾಸಿ ದಿನೇಶ್ ಎಂಬುವವರಿಗೆ ಮಾರಾಟ ಮಾಡಿದ್ದರು.
ಮಾರಾಟ ಮಾಡಿರುವ ಸದರಿ ನಿವೇಶನ ತಮ್ಮದೆಂದು ಕೋಕಿಲಾ ಮತ್ತು ಲಕ್ಷ್ಮಣ್ ರೆಡ್ಡಿ ಎಂಬುವವರು ತಗಾದೆ ತೆಗೆದಿದ್ದರು. ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸುವಂತೆ ದಿನೇಶ ಮೇಲೆ ಒತ್ತಡ ಹೇರುತ್ತಿದ್ದರು. ಈ ಸಂಬಂಧ ದಿನೇಶ್ ನ್ಯಾಯಾಲಯದಲ್ಲಿ ದಾವೆ ಹೂಡಿ ಕೋಕಿಲಾ ಮತ್ತು ಲಕ್ಷ್ಮಣ್ ರೆಡ್ಡಿ ನಿವೇಶನದೊಳಗೆ ಪ್ರವೇಶಿಸದಂತೆ ಪ್ರತಿಬಂಧಕಾಜ್ಞೆ ತಂದಿದ್ದರು.
ಇದನ್ನೂ ಓದಿ: VIDEO| ಸಿಂಹದ ಜತೆ ಹೋರಾಡಿ ಹಸುವನ್ನು ರಕ್ಷಿಸಿದ ರೈತ
ಬಳಿಕ ನ್ಯಾಯಾಲಯ ನೀಡಿ್ದ, ಪ್ರತಿಬಂಧಕಾಜ್ಞೆ ಪ್ರತಿಯೊಂದಿಗೆ ಪೀಣ್ಯ ಠಾಣೆಗೆ ತೆರಳಿ ಗವಿರಾಜ್ ದೂರು ನೀಡಿದ್ದರು. ಅರ್ಜಿದಾರ ದಿನೇಶ್ ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ವಿನಂತಿಸಿದ್ದರು. ಕಟ್ಟಡ ಕಾಮಗಾರಿ ಮುಂದುವರೆಸಲು, ರಕ್ಷಣೆ ನೀಡಲು ಠಾಣೆಯ ಹೆಡ್ ಕಾನ್ಸ್ಟೇಬಲ್ ಮಾರೇಗೌಡ 3 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ.
ಅರ್ಜಿದಾರರು ಆರೋಪಿಯೊಂದಿಗೆ ಚೌಕಾಸಿ ನಡೆಸಿದ್ದು, ಬಳಿಕ 1.5 ಲಕ್ಷ ರೂಪಾಯಿಗೆ ಒಪ್ಪಿಕೊಂಡಿದ್ದಾನೆ. ಈ ಕುರಿತು ಗವಿರಾಜ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಮಾರೇಗೌಡ ಪೊಲೀಸ್ ಠಾಣೆ ಬಳಿ ಇರುವ ಕೆಫೆ ಒಂದರಲ್ಲಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಇನ್ಸ್ಪೆಕ್ಟರ್ ಬಾಲಾಜಿ ಬಾಬು ಹಾಗೂ ತಂಡದವರು ದಾಳಿ ಮಾಡಿ ಆತನನ್ನು ವಶಕ್ಕೆ ಪಡೆದಿದ್ದಾರೆ.