ಜಿಲ್ಲೆ

ಕಳ್ಳತನದ ಹಣದಲ್ಲಿ ಸಾಲ ತೀರಿಸಿ ಜೈಲು ಸೇರಿದ

ಕಡಬ: ಮರ್ದಾಳ ಸಮೀಪದ ಮನೆಯೊಂದರಿಂದ ಹಾಡಹಗಲೇ ಬಾಗಿಲು ಮುರಿದು ಒಳ ನುಗ್ಗಿ ನಗದು ಮತ್ತು ಚಿನ್ನಾಭರಣ ದೋಚಿರುವ ಕಳ್ಳತನ ಪ್ರಕರಣವನ್ನು ಕಡಬ ಪೊಲೀಸರು ಐದೇ ದಿನದಲ್ಲಿ ಪತ್ತೆ ಹಚ್ಚಿದ್ದು ಕಳ್ಳ ಈಗ ಜೈಲುಪಾಲಾಗಿದ್ದಾನೆ.

ನೆಕ್ಕಿಲಾಡಿ ಗ್ರಾಮದ ಬಜಕೆರೆಯಲ್ಲಿ ಭಾನುವಾರ ಆಟೋ ಚಾಲಕ ಕುರಿಯಕೋಸ್​ ಯಾನೆ ಜೇಮ್ಸ್​ ಮನೆಯಲ್ಲಿ ಕಳ್ಳತನ ನಡೆದಿತ್ತು. ಮನೆಯಿಂದ ಕೂಗಳತೆ ದೂರದಲ್ಲಿರುವ ಮನೆಯ ಯುವಕನೇ ಈ ಕಳ್ಳತನದ ರೂವಾರಿ. ಕಳ್ಳತನ ಪ್ರಕರಣದ ಬೆನ್ನತ್ತಿದ ಪೊಲೀಸರು ಸುಳಿವುಗಳ ಆಧಾರದಲ್ಲಿ ಬಜಕರೆಯ ಸಿನು ಕುರಿಯನ್​ ಎಂಬಾತನನ್ನು ಬುಧವಾರ ರಾತ್ರಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಬೈಕ್​ನಲ್ಲಿ ಬಂದು ಕೊಟ್ಟಿಗೆಯಿಂದ ಪಿಕ್ಕಾಸು ತಂದು ಬಾಗಿಲು ಮುರಿದು ಕಳ್ಳತನ ಮಾಡಿದ್ದಾನೆ.

ಸಾಲದ ಸುಳಿಯಲ್ಲಿ ಸಿಲುಕಿದ ಕಾರಣ ಕಳ್ಳತನ ಮಾಡಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಹಣವನ್ನು ಸಾಲ ತೀರಿಸಲು ಬಳಸಿ ಉಳಿದ ಮೊತ್ತವನ್ನು ತನ್ನ ಬಳಿ ಇಟ್ಟುಕೊಂಡಿದ್ದ. ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.