ಜಿಲ್ಲೆ

ಸಿಕ್ಕಿಬಿದ್ದ ನಾಲ್ವರು ಹೆಂಡಿರ ಗಂಡ: ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂ. ಮೋಸ ಮಾಡಿದ್ದ ನಕಲಿ ಸರ್ವೇ ಅಧಿಕಾರಿ!

ಬೆಂಗಳೂರು: ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕು ಮದುವೆ ಆಗಿರುವ ಈತ ಮಾಡಿರುವ ಕಿತಾಪತಿ ಒಂದೆರಡಲ್ಲ. ಕೇಂದ್ರ ಸರ್ವೇ ಇಲಾಖೆ ಅಧಿಕಾರಿ ಎಂದು ಬಿಂಬಿಸಿಕೊಂಡು ಕೆಲಸ ಕೊಡಿಸುವುದಾಗಿ ಹಲವರಿಂದ ಹಣ ಪಡೆದು ಮೋಸ ಮಾಡಿರುವ ಈ ಭೂಪ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ರಾಘವೇಂದ್ರ ಎಂಬ 39 ವರ್ಷದ ಈತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಸರ್ಕಾರಿ ಅಧಿಕಾರಿಯ ಫಲಕ ಅಳವಡಿಸಿದ್ದ ಕಾರು ಮತ್ತು ನಕಲಿ ಗುರುತಿನ ಚೀಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಸರ್ವೇ ಇಲಾಖೆಯ ಉನ್ನತ ಅಧಿಕಾರಿ ಎಂದು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಆರೋಪಿ, ಅನೇಕರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದಾನೆ. ತನ್ನ ಕಾರಿಗೆ ಕೇಂದ್ರ ಸರ್ಕಾರದ ನಕಲಿ ಬೋರ್ಡ್ ಹಾಕಿಕೊಂಡು ಸುತ್ತಾಡುತ್ತಿದ್ದ ಆರೋಪಿ, ನಿರುದ್ಯೋಗಿಗಳಿಂದ ಒಟ್ಟು ಕೋಟ್ಯಂತರ ರೂಪಾಯಿ ಪಡೆದು ಮೋಸ ಮಾಡಿದ್ದಾನೆ.

ಭಾರತ ಸರ್ಕಾರ ಎಂದು ನಕಲಿ ಫಲಕ ಹಾಕಿಕೊಂಡು ಆರೋಪಿ ಬಳಸುತ್ತಿದ್ದ ಕಾರು.

ವಂಚಿಸಿದ ಹಣದಿಂದ ತುಮಕೂರಿನಲ್ಲಿ ಹೋಟೆಲ್, ಕೆಂಗೇರಿಯಲ್ಲಿ ಪ್ಲಾಟ್ ಹೊಂದಿರುವುದಲ್ಲದೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನೂ ಖರೀಸಿದ್ದಾನೆ. ಈತನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ನಕಲಿ ಗುರುತಿನ ಚೀಟಿ, ಮೊಬೈಲ್ ಪೋನ್, ಕಾರು, ಟ್ಯಾಬ್, ಲ್ಯಾಪ್​ಟಾಪ್, ಚೆಕ್ ಹಾಗೂ ಬಾಂಡ್ ಪೇಪರ್, ಖರೀದಿಸಿದ್ದ ಆಸ್ತಿಯ ಪತ್ರಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಐದಾರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಆರೋಪಿ, ಕೇಂದ್ರ ಸರ್ಕಾರದ ಸರ್ವೆ ಇಲಾಖೆಯ ಡೆಪ್ಯುಟಿ ಕಮಿಷನರ್ ಎಂದು ನಕಲಿ ಐಡಿ ಕಾರ್ಡ್ ಇಟ್ಟು ಕೊಂಡಿದ್ದ. ಅಲ್ಲದೆ ತನ್ನ ಕಾರಿಗೆ ಭಾರತ ಸರ್ಕಾರ ಎಂದು ಬೊರ್ಡ್ ತಗುಲಿಸಿಕೊಂಡಿದ್ದ. ನಿರುದ್ಯೋಗಿಗಳಿಗೆ ಸರ್ಕಾರಿ‌‌ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆಂದು ನಂಬಿಸುತ್ತಿದ್ದ. ಬಳಿಕ ಒಂದು ಸರ್ಕಾರಿ ಕೆಲಸಕ್ಕೆ 20 ಲಕ್ಷ ರೂ. ಬೇಡಿಕೆ ಇಟ್ಟು ಮುಗಂಡವಾಗಿ 10 ಲಕ್ಷ ರೂ. ಪಡೆಯುತ್ತಿದ್ದ. ಇನ್ನುಳಿದ 10 ಲಕ್ಷಕ್ಕೆ ಚೆಕ್ ಪಡೆಯುತ್ತಿದ್ದ. ಹೀಗೆ ಹಲವರ ಬಳಿ ಹಣ ಪಡೆದು ಕೆಲಸ ಕೊಡಿಸದೇ ವಂಚಿಸಿರುವ ಈತನ ವಿರುದ್ಧ ಬಂದಿರುವ ಹಲವಾರು ದೂರುಗಳನ್ನು ಆಧರಿಸಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಆರೋಪಿ ಬಳಿ ಇದ್ದ ನಕಲಿ ಗುರುತಿನ ಚೀಟಿ

ಕೆಲಸ ಕೊಡಿಸುವುದಾಗಿ ಬಾಂಡ್ ಪೇಪರ್ ಮೇಲೆ ಸಹಿ ಹಾಕಿಸಿಕೊಳ್ಳುತ್ತಿದ್ದ ಈತ ಸಹಿ ಮಾಡಿಸಿ ಖಾಲಿ ಚೆಕ್ ಪಡೆಯುತ್ತಿದ್ದ. ಕೆಲಸ ಸಿಗದೆ ಬಳಿಕ ವಂಚನೆಗೊಳಗಾದವರು ಹಣ ವಾಪಸ್​ ಕೇಳಿದರೆ ಸಹಿ ಹಾಕಿಸಿಕೊಂಡ ಬಾಂಡ್ ಪೇಪರ್ ತೋರಿಸಿ ಕೇಸ್ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದ ಎಂಬುದು ತಿಳಿದು ಬಂದಿದೆ.

ನಾಲ್ವರನ್ನು ಮದುವೆ ಆಗಿರುವ ಭೂಪ 

ವಂಚನೆ ಆರೋಪದ ಮೇಲೆ ಸಿಕ್ಕಿಬಿದ್ದಿರುವ ರಾಘವೇಂದ್ರ ಹಾವೇರಿ, ಬಾಗಲಕೋಟೆ, ಬೆಂಗಳೂರು ಮತ್ತು ಕುಂದಾಪುರದಲ್ಲಿ ಮದುವೆ ಮಾಡಿಕೊಂಡಿದ್ದು, ನಾಲ್ವರು ಹೆಂಡಿರ ಗಂಡ ಎನಿಸಿಕೊಂಡಿದ್ದಾನೆ. ಆಗಿರೋ ಭೂಪ. ಹತ್ತು ವರ್ಷಗಳ ಹಿಂದೆ ಕುಂದಾಪುರದಲ್ಲಿ ಖಾಸಗಿಯಾಗಿ ಸರ್ವೆ ಕೆಲಸ ಮಾಡಿಕೊಂಡಿದ್ದ‌‌ ಈತ ಬಳಿಕ ಹೆಚ್ಚಿನ ಹಣ ಗಳಿಸುವ ದುರಾಸೆಯಿಂದ ಸರ್ಕಾರಿ ಅಧಿಕಾರಿ ಸೋಗಿನಲ್ಲಿ ವಂಚನೆಗೆ ಇಳಿದಿದ್ದ‌.