ಜಿಲ್ಲೆ

ಪತ್ನಿಯನ್ನೇ ಬರ್ಬರವಾಗಿ ಕೊಂದ; 9 ವರ್ಷಗಳ ಹಿಂದೆ ಪ್ರೀತಿಸಿ ಮದ್ವೆಯಾಗಿದ್ದವ ಹೀಗೇಕೆ ಮಾಡಿದ?

ಹಾವೇರಿ: ಅವರಿಬ್ಬರೂ ಒಂಬತ್ತು ವರ್ಷಗಳ ಹಿಂದೆಯೇ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಅಷ್ಟು ಪ್ರೀತಿಸಿದ್ದ ಪತ್ನಿಯ ವಿರುದ್ಧ 9 ವರ್ಷಗಳ ಬಳಿಕ ಆತ ಅದೆಷ್ಟು ರೊಚ್ಚಿಗೆದ್ದಿದ್ದ ಎಂದರೆ ಪತ್ನಿಯನ್ನು ಕುಡುಗೋಲಿಂದ ಕಡಿದು ಕೊಲೆ ಮಾಡಿದ್ದಾನೆ. ಕೊಲೆಯ ಭೀಕರತೆಗೆ ನಗರವೇ ಬೆಚ್ಚಿಬಿದ್ದಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಮಾರುತಿ ನಗರದಲ್ಲಿ ಈ ಕೊಲೆ ನಡೆದಿದ್ದು, ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎನ್ನಲಾಗಿದೆ. ನೇತ್ರಾವತಿ ಹುಲಗಮ್ಮನವರ (30) ಮೃತಪಟ್ಟಿದ್ದು, ಪತಿ ನವೀನ್​ ಆರೋಪಿ. ಕೌಟುಂಬಿಕ ವಿಚಾರವಾಗಿ ತುಂಬ ದಿನಗಳಿಂದ ಇವರಿಬ್ಬರ ಮಧ್ಯೆ ಜಗಳ ನಡೆಯುತ್ತಿದ್ದು, ಇಂದು ಕೊಲೆಯಲ್ಲಿ ಅಂತ್ಯಗೊಂಡಿದೆ.

ನವೀನ್​ ಬಾರ್​ವೊಂದರ ಕಟ್ಟಡದ ಮಾಲೀಕನಾಗಿದ್ದು, ಇಂದು ಮಧ್ಯಾಹ್ನ ಪತ್ನಿ ಜತೆ ಜಗಳವಾಗಿದೆ. ಕುಡುಗೋಲಿನಿಂದ ಪತ್ನಿಯ ತಲೆ ಹಾಗೂ ಕುತ್ತಿಗೆಗೆ ಬಲವಾಗಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕೊಲೆ ಬಳಿಕ ನವೀನ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.