ಜಿಲ್ಲೆ

ಜೈಲಿನಿಂದ ಹೊರಬರುತ್ತಿದ್ದಂತೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಎಚ್​.ಡಿ ರೇವಣ್ಣ! ಹೇಳಿದಿಷ್ಟು...

ಮೈಸೂರು: ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಪರಪ್ಪರ ಅಗ್ರಹಾರ ಜೈಲಿನಿಂದ ಬಿಡುಗಡೆ ಹೊಂದಿದ ಶಾಸಕ ಎಚ್.ಡಿ. ರೇವಣ್ಣ ಮಂಗಳವಾರ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಪೆನ್‌ಡ್ರೈವ್ ಪ್ರಕರಣದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಕುಟುಂಬದ ಪ್ರತಿ ಸದಸ್ಯರ ಹೆಸರಿನಲ್ಲಿ ರೇವಣ್ಣ ವಿಶೇಷ ಪೂಜೆ ಸಲ್ಲಿಸಿದರು. ಕುಟುಂಬದ ಪ್ರತಿಯೊಬ್ಬರ ಹೆಸರು ಹಾಗೂ ನಕ್ಷತ್ರ ಹೇಳಿ ರೇವಣ್ಣ ಅರ್ಚನೆ ಮಾಡಿಸಿದರು.

ಸಂಕಷ್ಟಗಳು ಬಾರದೆ ಇರಲಿ ಎಂದು ಬಲಗೈಗೆ ರಕ್ಷಾಸೂತ್ರ ಕಣ್ಣಿಸಿಕೊಂಡರು. ಈ ಸಂದರ್ಭ ಮನಸ್ಸಿನಲ್ಲಿ ದೇವರನ್ನು ನೆನೆಯುತ್ತಾ ಪ್ರಾರ್ಥಿಸಿದರು. ನಂತರ ದೇವಾಲಯದಲ್ಲಿ 10 ನಿಮಿಷ ಏಕಾಂಗಿಯಾಗಿ ಕುಳಿತು ಕಷ್ಟಗಳನ್ನು ದೂರ ಮಾಡುವಂತೆ ತಾಯಿ ಶ್ರೀ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದರು.

ತಾಯಿ ಶ್ರೀ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ತಾಯಿ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆದಿದ್ದೇನೆ. ದೇವರು ಹಾಗೂ ರಾಜ್ಯದ ಜನರ ಮೇಲೆ ನನಗೆ ನಂಬಿಕೆ ಇದೆ. 40 ವರ್ಷದ ರಾಜಕೀಯ ಜೀವನದಲ್ಲಿ ನನ್ನ ಮೇಲೆ ಇದೇ ಪ್ರಥಮ ಬಾರಿಗೆ ಪ್ರಕರಣ ದಾಖಲಾಗಿರುವುದು. ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇದ್ದು, ಪ್ರಕರಣದಲ್ಲಿ ನನಗೆ ನ್ಯಾಯ ದೊರೆಯುವ ವಿಶ್ವಾಸವಿದೆ. ತಾಯಿ ಚಾಮುಂಡೇಶ್ವರಿ ಏನು ಕರುಣೆ ತೋರಿಸುತ್ತಾಳೆ ನೋಡೋಣ ಎಂದು ಹೇಳಿದರು.

ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆ ವಿಚಾರವನ್ನು ತಾಯಿಗೆ ಬಿಟ್ಟಿದ್ದೇನೆ. ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಹೆಚ್ಚು ಮಾತನಾಡಲು ಬಯಸುವುದಿಲ್ಲ ಎಂದರು.