ಕೊಲೆಯಾದ ಯುವಕ ಪುನೀತ್ ಕುಮಾರ್ 
ಹಾವೇರಿ

ಹಾವೇರಿಯಲ್ಲಿ ಪ್ರೇಮ ವಿವಾಹದ ದ್ವೇಷಕ್ಕೆ ಯುವಕನ ಕೊಲೆ?; 13 ದಿನಗಳ ಬಳಿಕ ತುಂಗಭದ್ರಾ ನದಿಯಲ್ಲಿ ಶವ ಪತ್ತೆ: ಪ್ರಕರಣ ದಾಖಲು | Haveri

ಹರಿಹರ ತಾಲೂಕಿನ ಕುಮಾರಪಟ್ಟಣದ ಬಳಿ ಅನ್ಯ ಸಮುದಾಯದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ದ್ವೇಷ ಬೆಳೆಸಿಕೊಂಡು ಯುವಕನನ್ನು ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ಬಳಿಕ ಗುರುತು ಸಿಗದಂತೆ ಶವವನ್ನು ತುಂಗಭದ್ರಾ ನದಿಗೆ ಎಸೆದಿದ್ದಾರೆ ಎಂದು ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವೇರಿ: ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಕುಮಾರಪಟ್ಟಣದ ಬಳಿ ಅನ್ಯ ಸಮುದಾಯದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ದ್ವೇಷ ಬೆಳೆಸಿಕೊಂಡು ಯುವಕನನ್ನು ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ಬಳಿಕ ಗುರುತು ಸಿಗದಂತೆ ಶವವನ್ನು ತುಂಗಭದ್ರಾ ನದಿಗೆ ಎಸೆದಿದ್ದಾರೆ ಎಂದು ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಣೆಬೆನ್ನೂರು ತಾಲೂಕಿನ ಕೊಡಿಯಾಲ ಹೊಸಪೇಟೆ ಗ್ರಾಮದ ಪುನೀತಕುಮಾರ ಶಿಗ್ಲಿ ಕೊಲೆಯಾದ ಯುವಕ. ಪುನೀತಕುಮಾರನ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಡಿಯಾಲ ಹೊಸಪೇಟೆಯ ಚಂದ್ರಪ್ಪ ಭೀಮಣ್ಣ ಗೋಣೆಪ್ಪನವರ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಪುನೀತಕುಮಾರ 2024ರಲ್ಲಿ ಯುವತಿಯೊಬ್ಬಳನ್ನು ಪ್ರೀತಿಸಿ ರಿಜಿಸ್ಟರ್ ಮದುವೆಯಾಗಿದ್ದ. ಆದರೆ ಯುವತಿಯ ಕುಟುಂಬಸ್ಥರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಕುಟುಂಬದ ಒತ್ತಾಯದ ಮೇರೆಗೆ ಯುವತಿ ಪುನೀತ್​ ಕುಮಾರ್​ಗೆ ವಿಚ್ಛೇದನ ನೀಡಲು ಮುಂದಾಗಿದ್ದಳು ಎನ್ನಲಾಗಿದೆ. ಈ ಸಂಬಂಧ ಕೋರ್ಟ್​ಗೆ ಅರ್ಜಿ ಸಲ್ಲಿಸಿದ ಹಿನ್ನೆಲೆ ಎರಡೂ ಕುಟುಂಬಗಳ ನಡುವೆ ವೈಷಮ್ಯ ಉಂಟಾಗಿತ್ತು ಎನ್ನಲಾಗಿದೆ.

ವಾಲಿಬಾಲ್ ಆಡುವಾಗ ಜಗಳ

ಸೆ. 7ರಂದು ಕೊಡಿಯಾಲ ಹೊಸಪೇಟೆಯ ಗಂಗಾಪರಮೇಶ್ವರಿ ದೇವಸ್ಥಾನದ ಬಳಿ ವಾಲಿಬಾಲ್ ಆಡುತ್ತಿದ್ದ ಸಂದರ್ಭದಲ್ಲಿ ಯುವತಿಯ ವಿಚಾರವಾಗಿ ಕೆಲವರು ಪುನೀತಕುಮಾರ ಜತೆ ಜಗಳ ತೆಗೆದು ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ವೇಳೆ ನಮ್ಮ ಜಾತಿಯ ಹುಡುಗಿಯನ್ನು ಮದುವೆಯಾಗಿದ್ದೀಯಾ, ಮುಂದೆ ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಅದೇ ದಿನ ರಾತ್ರಿ ಮನೆಯಿಂದ ಹೊರಗೆ ಹೋಗಿದ್ದ ಪುನೀತಕುಮಾರ್ ಬಳಿಕ ನಾಪತ್ತೆಯಾಗಿದ್ದ. ಆತನನ್ನು ಐಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಕರೆಯಿಸಿಕೊಂಡು ಯಾವುದೋ ಆಯುಧಗಳಿಂದ ಹಲ್ಲೆ ಮಾಡಿ ಕೊಲೆಗೈದು, ಗುರುತು ಸಿಗದಂತೆ ತುಂಗಭದ್ರಾ ನದಿಗೆ ಎಸೆದಿರುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ಕುಟುಂಬಸ್ಥರು ಆರೋಪಿಸಿದ್ದಾರೆ.

13 ದಿನಗಳ ಬಳಿಕ ನದಿಯಲ್ಲಿ ಶವ ಪತ್ತೆ

ಸೆ. 20ರಂದು ಹರಿಹರ ತಾಲೂಕಿನ ಗುತ್ತೂರು ಸಮೀಪ ತುಂಗಭದ್ರಾ ನದಿಯ ದಂಡೆಯಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಶವವನ್ನು ಜಲಚರ ಪ್ರಾಣಿಗಳು ಕಿತ್ತು ತಿಂದ ಸ್ಥಿತಿಯಲ್ಲಿ ಕಂಡುಬಂದಿದೆ. ಆದರೆ, ಶವದಿಂದ ಸುಮಾರು 5 ಮೀಟರ್ ದೂರದಲ್ಲಿ ಕೆಂಪು-ನೀಲಿ ಚೆಕ್ಸ್ ಶರ್ಟ್ ಹಾಗೂ ಒಂದು ಮೀಟರ್ ಅಂತರದಲ್ಲಿ ಕಪ್ಪು ಬಣ್ಣದ ಬರ್ಮುಡಾ ಪತ್ತೆಯಾಗಿದೆ. ಇದು ಸೆ. 7ರಂದು ರಾತ್ರಿ ಮನೆಯಿಂದ ಹೊರಡುವಾಗ ಪುನೀತಕುಮಾರ ಧರಿಸಿದ್ದ ಬಟ್ಟೆಗಳೇ ಅವು ಎಂದು ಕುಟುಂಬಸ್ಥರು ಗುರುತಿಸಿದ್ದಾರೆ.

ಇನ್ನೂ ಯುವಕನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಮೊದಲು ಹರಿಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈಗ ಶವ ಕುಮಾರಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಹಿನ್ನೆಲೆಯಲ್ಲಿ ಹರಿಹರ ಠಾಣೆ ಪೊಲೀಸರು ಪ್ರಕರಣವನ್ನು ಕುಮಾರಪಟ್ಟಣ ಠಾಣೆಗೆ ವರ್ಗಾಯಿಸಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಹತ್ಯೆಗೆ ಪತ್ನಿಯೇ ಕುಮ್ಮಕ್ಕು...?

ಪುನೀತಕುಮಾರ ಪತ್ನಿ ಹತ್ಯೆಗೆ ಕುಮ್ಮಕ್ಕು ನೀಡಿರುವ ಸಾಧ್ಯತೆಯಿದೆ. ಆಕೆಯ ಸಹೋದರರಾದ ಅಭಿಷೇಕ ಜಿ ಮತ್ತು ಅಭಿಷೇಕ್ ಎನ್ ಸೇರಿ ಇನ್ನೂ ಹಲವರು ಪುನೀತಕುಮಾರನನ್ನು ಕೊಲೆ ಮಾಡಿ, ಶವವನ್ನು ತುಂಗಭದ್ರಾ ನದಿಗೆ ಎಸೆದಿರುವ ಸಾಧ್ಯತೆಯಿದೆ. ಆದ್ದರಿಂದ ಈ ಕುರಿತು ತನಿಖೆ ನಡೆಸಿ, ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕುಟುಂಬಸ್ಥರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.