ಹಾವೇರಿ: ಇತ್ತೀಚಿನ ದಿನಗಳಲ್ಲಿ ಮಲ್ಟಿಫ್ಲೆಕ್ಸ್ ಹಾವಳಿಯಿಂದಾಗಿ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳಲ್ಲಿ ಸಿನಿಮಾಗಳನ್ನು ನೋಡುವ, ಅದರಲ್ಲೂ ಕನ್ನಡ ಸಿನಿಮಾಗಳನ್ನು ನೋಡಲು ಥಿಯೇಟರ್ಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ತೀರಾ ಕಡಿಮೆಯಾಗಿದೆ ಎಂಬ ಸಂದರ್ಭದಲ್ಲಿ ಕೆಲ ದಿನಗಳ ಹಿಂದೆ ತೆರೆಕಂಡ 'ಪ್ರೇಮದ ಊರಲಿ' ಎಂಬ ಸಿನಿಮಾ ಕನ್ನಡ ಪ್ರೇಕ್ಷಕರ ಮನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬಹುದಾಗಿದೆ.
ಈ ಸಿನಿಮಾದ ಕ್ರೇಜ್ ಯಾವ ಮಟ್ಟವನ್ನು ಮುಟ್ಟಿದೆ ಎಂದರೆ, ಟಾಕೀಸ್ಗೆ ಜನವೇ ಬರುತ್ತಿಲ್ಲವೆಂದು ತಲೆ ಮೇಲೆ ಕೈ ಹೊತ್ತಿದ್ದ ಟಾಕೀಸ್ ಮಾಲೀಕರು, ಈ ಸಿನಿಮಾ ನೋಡಲು ಬರುತ್ತಿರುವ ಜನರನ್ನು ಸಂಬಾಳಿಸುವುದೇ ಸಾಹಸವಾಗಿ ಪರಿಣಮಿಸಿದೆ.
ಗುರುವಾರ (ಅ.22) ಹಾವೇರಿಯ ಮಾಗಾವಿ ಚಿತ್ರಮಂದಿರದಲ್ಲಿ ಈ ಪ್ರೇಮದ ಊರಲಿ ಸಿನಿಮಾದ ಟಿಕೆಟ್ ಪಡೆದುಕೊಳ್ಳುವ ಸಂದರ್ಭದಲ್ಲಿ ಮಹಿಳೆಯರ ನಡುವೆ ಪ್ರಾರಂಭವಾದ ವಾಗ್ವಾದ ನಂತರ, ಕೈ-ಕೈ ಮಿಲಾಯಿಸುವ ಮಟ್ಟವನ್ನು ತಲುಪಿದೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾನಲ್ಲ ಸಖತ್ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ, ಸಿನಿಮಾ ಟಿಕೆಟ್ ಪಡೆಯಲು ಮಹಿಳೆಯರು, ಪುರುಷರು, ಮಕ್ಕಳು ಸೇರಿದಂತೆ ಎಲ್ಲಾ ವಯಸ್ಸಿನ ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ಮಧ್ಯೆ ಒಮ್ಮಲೇ ಇಬ್ಬರು ಮಹಿಳೆಯರ ನಡುವೆ ಏನೋ ಸಮಸ್ಯೆ ಕಂಡು ಬಂದಿದೆ. ನಂತರ ಇಬ್ಬರು ಒಬ್ಬರನೊಬ್ಬರು ಅವಾಚ್ಯ ಪದಗಳಿಂದ ಬಯ್ಯುತ್ತಾ, ನಂತರ ಹೊಡೆದಾಡಲು ಶುರುವಿಟ್ಟಿದ್ದಾರೆ. ಈ ವಾಗ್ವಾದ ತಾರಕಕ್ಕೇರಿ, ಮಹಿಳೆಯರು ಪರಸ್ಪರರ ಜಡೆಯನ್ನು ಎಳೆದುಕೊಳ್ಳುತ್ತಾ, ಮಾಂಗಲ್ಯ ಸರವನ್ನು ಕೀಳುವ ಮಟ್ಟಕ್ಕೆ ಇಳಿದು, ಒಬ್ಬರನೊಬ್ಬರು ಬಡಿದಾಡಿಕೊಂಡಿದ್ದಾರೆ.
ಈ ಒಬ್ಬರು ಮಹಿಳೆಯರ ವರ್ತನೆಯಿಂದ ಕಂಗೆಟ್ಟ ಕೆಲ ಪುರುಷರು ಈ ಮಹಿಳಾ ಮಣಿಯರನ್ನು ಸುಮ್ಮನಾಗಿಸಿ, ಜಗಳವನ್ನು ಶಾಂತಪಡಿಸಲು ಮುಂದಾಗಿದ್ದಾರೆ. ಹೀಗೆ ಪರಿಹಾರಕ್ಕೆ ಮುಂದೆ ಬಂದ ಪುರುಷರ ಮೇಲೆ ಕೂಡ ಇವರು ಹರಿಹಾಯ್ದಿದ್ದು, ಕೆಟ್ಟ-ಕೊಳಕದಾಗಿ ಬಯ್ಯುತ್ತಾ, ಕೈ-ಕೈ ಮೀಲಾಯಿಸಲು ಮುಂದಾಗಿದ್ದಾರೆ.
ಮನೋಜ್ ಕುಮಾರ್ ನಿರ್ದೇಶನದ, ಶ್ರೀ ರಾಮ್, ತಪಸ್ವಿನಿ ಪೂಣಚ್ಚ, ರಮಿಕಾ ಶಿವು ಮತ್ತು ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಪ್ರೇಮದ ಊರಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕೇವಲ 2 ಕೋಟಿ ಬಜೆಟ್ನಲ್ಲಿ ತಯಾರಾದ ಈ ಸಿನಿಮಾ ಯಾವುದೇ ಫ್ಯಾನ್ ಇಂಡಿಯಾ ನಟ-ನಟಿಯರಿಲ್ಲದೇ, ದೊಡ್ಡ ಬ್ಯಾನರ್ ಮತ್ತು ಯಾವುದೇ ಪಿಆರ್ ಇಲ್ಲದೇ ಕೇವಲ ಜನರ ಬಾಯಿಮಾತಿನ ಪ್ರಚಾರದ ಮೂಲಕ ಕನ್ನಡಿಗರ ಮನಸ್ಸನ್ನು ಗೆಲ್ಲುವಲ್ಲಿ ಸಫಲವಾಗಿದೆ. ಈ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕ ಕೇವಲ 2 ಕೋಟಿಯಲ್ಲಿ ನಿರ್ಮಾಣವಾದ ಈ ಸಿನಿಮಾ ಇಂದು ನೂರು ಕೋಟಿಗೂ ಮೀರಿದ ಕಲೆಕ್ಷನ್ ಮಾಡುವಂತೆ ಮಾಡಿದ್ದಾನೆ.
ಸಿನಿಮಾದಲ್ಲಿ ದೊಡ್ಡ ತಾರಾಗಣ, ವಿಎಫ್ಎಕ್ಸ್ ಸಾವಿರಾರು ಕೋಟಿ ಬಜೆಟ್ ಮುಖ್ಯವಲ್ಲ. ಬದಲಾಗಿ ಅಚ್ಚುಕಟ್ಟಾದ ಕತೆ, ಮನಸ್ಸಿಗೆ ಹತ್ತಿರವಾಗುವ ಪಾತ್ರಗಳು ಮತ್ತು ಭಾವನಾತ್ಮಕ ಕಥಾಹಂದರ ಹೊಂದಿದ್ದರೆ 2 ಕೋಟಿ ಸಿನಿಮಾ ಕೂಡ 100 ಕೋಟಿ ಗಳಿಸಬಹುದು ಎನ್ನುವುದಕ್ಕೆ ಪ್ರೇಮದ ಊರಲಿ ನೈಜ ಉದಾಹರಣೆಯಾಗಿದೆ.