ಹಾನಗಲ್ಲ ತಾಲೂಕಿನ ಶಂಕರ ಬನ್ನೂರುಗೆ ಗ್ರಾಮಸ್ಥರಿಂದ ಸನ್ಮಾನ 
ಹಾವೇರಿ

ವಿಎ ಪರೀಕ್ಷೆಯಲ್ಲಿ 151 ಅಂಕ ಪಡೆದು ರಾಜ್ಯಕ್ಕೆ ಪ್ರಥಮ: ಸಂಶಯ ಬೆನ್ನಲ್ಲೇ ತನಿಖೆಗೆ ಆದೇಶ, ಟಾಪರ್ ಶಂಕರ ಬನ್ನೂರು ಹೇಳಿದ್ದೇನು? Village Accountant Exam Topper

ಹಾವೇರಿ: ಗ್ರಾಮ ಲೆಕ್ಕಾಧಿಕಾರಿ (ವಿಎ) ನೇಮಕಾತಿ ಪರೀಕ್ಷೆಯಲ್ಲಿ 151 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿರುವ ಹಾನಗಲ್ಲ ತಾಲೂಕಿನ ಶಂಕರ ಬನ್ನೂರು ( Village Accountant Exam Topper ) ಅವರ ಫಲಿತಾಂಶದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅನುಮಾನ ವ್ಯಕ್ತಪಡಿಸಿ ತನಿಖೆಗೆ ಆಗ್ರಹಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತನಿಖೆಗೆ ಆದೇಶಿಸಿದೆ.

ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಶಂಕರ ಬನ್ನೂರು, ‘ಯಾವುದೇ ತನಿಖೆಗೂ ನಾನು ಸಿದ್ಧನಿದ್ದೇನೆ. ನನ್ನ ಎಲ್ಲ ಮೂಲ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

45ಕ್ಕೂ ಅಧಿಕ ಪರೀಕ್ಷೆ ಬರೆದಿದ್ದೇನೆ

‘ನಾನು ಈವರೆಗೆ 45ಕ್ಕೂ ಅಧಿಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಿದ್ದೇನೆ. ಕೆಲವು ಪರೀಕ್ಷೆಗಳಲ್ಲಿ ಸಂದರ್ಶನ ಹಂತದವರೆಗೆ ಹೋಗಿದ್ದೇನೆ. ಇನ್ನೂ ಕೆಲವು ಪರೀಕ್ಷೆಗಳಲ್ಲಿ ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಂಡು ನೌಕರಿ ಕೈತಪ್ಪಿದೆ. ಹೋಟೆಲ್, ಸಿನಿಮಾ, ಮಂದಿರ ಸೇರಿದಂತೆ ವಿವಿಧೆಡೆ ಕೆಲಸ ಮಾಡುತ್ತಲೇ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದ್ದೇನೆ’ ಎಂದು ಶಂಕರ ಬನ್ನೂರು ತಿಳಿಸಿದರು.

‘ನಾನು ಬಡ ಕುಟುಂಬದಿಂದ ಬಂದಿದ್ದು, ಸಾಕಷ್ಟು ಕಷ್ಟಪಟ್ಟು ಓದಿದ್ದೇನೆ. ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರುವುದು ನನ್ನ ಪರಿಶ್ರಮದ ಫಲ. ಯಾವುದೇ ಅಕ್ರಮದಿಂದ ಈ ಸಾಧನೆ ಮಾಡಿಲ್ಲ. ಅಧಿಕಾರಿಗಳು ನಡೆಸುವ ಯಾವುದೇ ತನಿಖೆಗೂ ಸಂಪೂರ್ಣ ಸಹಕಾರ ನೀಡುತ್ತೇನೆ’ ಎಂದರು.

ಕಾನ್ಸಟೇಬಲ್ ಪರೀಕ್ಷೆಯಲ್ಲಿ 25 ಅಂಕ

‘ಕಾನ್ಸಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ನನಗೆ 25 ಅಂಕ ಬಂದಿತ್ತು. ಆ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ನನ್ನ ಸಹೋದರಿಗೆ ಅಪಘಾತವಾಗಿತ್ತು. ನನಗೂ ಗಾಯವಾಗಿತ್ತು. ಹೀಗಾಗಿ ಅಂದು ಪರೀಕ್ಷೆಯನ್ನು ಸರಿಯಾಗಿ ಬರೆಯಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಕೆಲವರು ನನ್ನ ಬಗ್ಗೆ ವಿವಿಧ ರೀತಿಯ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅವರು ಯಾವ ಆಧಾರದ ಮೇಲೆ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂಬುದು ನನಗೆ ತಿಳಿದಿಲ್ಲ.

2013ರಲ್ಲಿ ಪಿಯುಸಿ ಪರೀಕ್ಷೆ ಬರೆದಿದ್ದೇನೆ

‘ನಾನು 2013ರಲ್ಲಿ ಪಿಯುಸಿ ಪರೀಕ್ಷೆ ಬರೆದಿದ್ದೇನೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ನನ್ನ ಪಿಯುಸಿ ಅಂಕಪಟ್ಟಿ ಅಥವಾ ದಾಖಲೆ 2026ಕ್ಕೆ ಸಂಬಂಧಿಸಿದಂತೆ ಕಾಣಿಸಿಕೊಂಡಿರುವುದು ಹೇಗೆ ಎಂಬುದು ನನಗೆ ಗೊತ್ತಿಲ್ಲ. ಈ ಕುರಿತು ಅಧಿಕಾರಿಗಳು ಪರಿಶೀಲಿಸಿ ಸತ್ಯಾಸತ್ಯತೆ ತಿಳಿಸಬೇಕು’ ಎಂದು ಹೇಳಿದರು. ಈ ಸಂಬಂಧ ಬುಧವಾರ ಪೊಲೀಸರು ಹಾಗೂ ತಹಸೀಲ್ದಾರ್ ತಮ್ಮನ್ನು ಕರೆಸಿ ವಿಚಾರಣೆ ನಡೆಸಿದ್ದು, ತಮ್ಮಲ್ಲಿದ್ದ ಎಲ್ಲ ಮೂಲ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿದ್ದೇನೆ ಎಂದರು.

ನಾಳೆ ಜಿಲ್ಲಾಧಿಕಾರಿ ಭೇಟಿ

‘ನನ್ನ ಬಗ್ಗೆ ಯಾವುದೇ ಅನುಮಾನಗಳಿದ್ದರೂ ಅಧಿಕಾರಿಗಳು ತನಿಖೆ ನಡೆಸಲಿ. ನನ್ನ ದಾಖಲೆಗಳು, ಪರೀಕ್ಷೆಗಳಿಗೆ ಹಾಜರಾದ ವಿವರಗಳು ಸೇರಿದಂತೆ ಎಲ್ಲವನ್ನೂ ಪರಿಶೀಲಿಸಲಿ. ಸತ್ಯ ಹೊರಬರಲಿದೆ. ನಾನು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಲು ನಾಳೆ ತೆರಳುತ್ತಿದ್ದೇನೆ’ ಎಂದು ತಿಳಿಸಿದರು.

ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿರುವ ಶಂಕರ ಬನ್ನೂರು ಅವರ ಫಲಿತಾಂಶದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಇಎ ತನಿಖೆಗೆ ಆದೇಶಿಸಿರುವುದು ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಮೂಡಿಸಿದೆ. ತನಿಖೆಯ ಬಳಿಕವಷ್ಟೇ ಆರೋಪಗಳ ಸತ್ಯಾಸತ್ಯತೆ ಸ್ಪಷ್ಟವಾಗಬೇಕಿದೆ.

ಗ್ರಾಮದ ಯುವಕರಿಂದ ಸನ್ಮಾನ

ಶಂಕರ ಬನ್ನೂರು ಗ್ರಾಮ ಲೆಕ್ಕಾಧಿಕಾರಿ (ವಿಎ) ನೇಮಕಾತಿ ಪರೀಕ್ಷೆಯಲ್ಲಿ 151 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿರುವ ಹಿನ್ನೆಲೆಯಲ್ಲಿ ಹಾನಗಲ್ಲ ಪಟ್ಟಣದಲ್ಲಿ ಆತನನ್ನು ಸ್ಥಳೀಯ ಯುವಕರು ಸನ್ಮಾನಿಸಿದರು.