ಹೆಬ್ರಿ: ಸಾಮರಸ್ಯ ಮತ್ತು ಸಮಾನತೆ ತಿರುಳು ಭಾರತದ ಸಂವಿಧಾನ ಎಂದು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಜಯಪ್ರಕಾಶ್ ಶೆಟ್ಟಿ ಎಚ್. ಹೇಳಿದರು.
ಹಿರಿಯಡಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ‘ಗಾಂಧಿ ಭಾರತ’ ಕಾರ್ಯಕ್ರಮ ಅಂಗವಾಗಿ ನಡೆದ ರಸಪ್ರಶ್ನೆ, ಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಬಹುಜನರ ಬದುಕು ಕೆಡದಂತೆ ಉಳಿಯಲು ನಮ್ಮೊಳಗಿರುವ ಗಾಂಧಿ ಮತ್ತು ಅಂಬೇಡ್ಕರ್ ಎಂಬ ಕರುಣೆ ಮತ್ತು ವೈಚಾರಿಕ ಎಚ್ಚರಗಳ ಕಣ್ಣುಗಳು ಮಸುಕಾಗದಂತೆ ಸಂರಕ್ಷಿಸಿಕೊಳ್ಳಬೇಕು. ಎಚ್ಚರದಿಂದ ಇರುವುದೇ ಸಂವಿಧಾನಕ್ಕೆ ಕಾವಲು. ಗಾಂಧಿ ಭಾರತ ಮತ್ತು ಅಂಬೇಡ್ಕರ್ ಭಾರತದಂತಹ ಕಾರ್ಯಕ್ರಮ ಮನೆ ಮನೆಗೆ ತಲುಪುವ ಅಗತ್ಯವಿದೆ ಎಂದು ಹೇಳಿದರು.
ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಚಾಲಕಿ ಡಾ.ಸೌಮ್ಯಲತಾ ಪಿ., ಡಾ.ಲಿತಿನ್ ಬಿ.ಎಂ. ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಅಪರ್ಣಾ ಕೆ.ಯು. ನಿರೂಪಿಸಿದರು.