ಹುಬ್ಬಳ್ಳಿ: 'ಶಾಲೆ ಖಾಲಿ ಮಾಡ್ಬೇಡಿ.. ನಾನು ಓದಿ ದೊಡ್ಡ ವ್ಯಕ್ತಿ ಆಗ್ಬೇಕು, ನನ್ನ ತಾಯಿಯನ್ನ ಸಾಕಬೇಕು... ನಮ್ ಶಾಲೆ ಖಾಲಿ ಮಾಡ್ಸಿದ್ರೆ ನಮ್ ಟೀಚರ್ ರೋಡಲ್ಲಿ ಕೂರ್ಸಿ ಪಾಠ ಮಾಡ್ಬೇಕಾ? ನಮ್ಗೆ ಯಾರ್ಗೂ ಶಾಲೆ ಬಿಟ್ ಕೊಡಾಕ
ಮನಸ್ಸಿಲ್ರಿ...' ಇದು ಹುಬ್ಬಳ್ಳಿಯ 'ಹರಿಜನ ಹೆಣ್ಣು ಮಕ್ಕಳ ಕನ್ನಡ ಪ್ರಾಥಮಿಕ ಶಾಲೆ' ಬಾಗಿಲಲ್ಲಿ ವಿದ್ಯಾರ್ಥಿಗಳು ಕೈ ಮುಗಿಯುತ್ತಾ ಕಣ್ಣೀರಿಟ್ಟ ಪರಿ.
ಹರಿಜನ ಹೆಣ್ಣುಮಕ್ಕಳ ಕನ್ನಡ ಪ್ರಾಥಮಿಕ ಶಾಲೆ ಆವರಣದಲ್ಲಿ ಇಂದು ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸರೊಂದಿಗೆ ಮಕ್ಕಳು ಮತ್ತು ಶಿಕ್ಷಕರು ವಾಗ್ವಾದ ನಡೆಸಿದ್ದಾರೆ.
ಕನಿಷ್ಠ ಪಕ್ಷ ಈ ವರ್ಷದ ಶೈಕ್ಷಣಿಕ ಚಟುವಟಿಕೆ ಮುಗಿಯುವವರೆಗೂ ಅವಕಾಶ ಕೊಡಿ ಎಂದು ಆಗ್ರಹಿಸಿದರು. ಆದರೂ ಕೇಳದೆ ಶಾಲೆಯಲ್ಲಿನ ಸಾಮಗ್ರಿ ಹೊರ ಹಾಕಿ ನಮ್ಮನ್ನು ಬೀದಿ ಪಾಲು ಮಾಡಿದ್ದಾರೆ ಎಂದು ಶಾಲೆ ಶಿಕ್ಷಕರು ಅಳುಲುತೋಡಿಕೊಂಡರು.
ಇತ್ತ ಸದ್ಯ ಶಾಲೆಯ ಜಾಗ ಬಿಡುವಂತೆ ಗಾಂಧಿವಾಡ ಕೋ ಆಪರೇಟಿವ್ ಸೊಸೈಟಿ ಖೊಟ್ಟಿ ದಾಖಲೆ ಸೃಷ್ಟಿಸಿ ದಾವೆ ಹೂಡಿತ್ತು. ಶಾಲೆ ಖಾಲಿ ಮಾಡುವಂತೆ ಕೋರ್ಟ್ ಹೇಳಿದೆ ಎಂದು ಸೊಸೈಟಿಯವರು ಹೇಳುತ್ತಿದ್ದಾರೆ. ಆದೇಶದಲ್ಲಿ ಶಾಲಾ ಕಟ್ಟಡ ಖಾಲಿ ಮಾಡುವಂತೆ ನಮೂದಿಲ್ಲ. ಒತ್ತಾಯ ಪೂರ್ವಕವಾಗಿ ಪೊಲೀರನ್ನು ಕರೆತಂದು ಶಾಲೆ ಖಾಲಿ ಮಾಡಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.