ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಹರೇಕಳ ಗ್ರಾಮದಲ್ಲಿ 9.50 ಎಕರೆ ಜಮೀನು ನಿವೇಶನ ರಹಿತರಿಗೆ ಮೀಸಲಿಡಲಾಗಿದೆ. ಯಾವುದೇ ಗ್ರಾಮದಲ್ಲೂ ಇಷ್ಟು ಬೇಗ ಜಾಗ ಗುರುತಿಸುವ ಕೆಲಸ ಆಗಿಲ್ಲ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಹರೇಕಳ ಗ್ರಾಮ ಪಂಚಾಯಿತಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಸೋಮವಾರ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಅಂಗನವಾಡಿ, ಮೈದಾನ, ಪಾರ್ಕ್ ಸಹಿತ ವ್ಯವಸ್ಥಿತ ರೀತಿಯಲ್ಲಿ ಮಾದರಿಯಾಗಿ ಲೇಔಟ್‌ಗೆ ನೀಲಿನಕಾಶೆ ರೂಪಿಸಿ. ಈ ವಿಚಾರದಲ್ಲಿ ಕಂದಾಯ, ಸರ್ವೇ, ಇಂಜಿನಿಯರಿಂಗ್ ಇಲಾಖೆ ಜತೆಯಾಗಿ ಯೋಜನೆ ರೂಪಿಸಬೇಕು. ಗ್ರಾಮದಲ್ಲಿರುವ ಸರ್ಕಾರಿ ಜಾಗದ ಪಟ್ಟಿ ವಾರದಲ್ಲಿ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
40 ವರ್ಷಗಳಿಂದ ಬಾಕಿಯಿದ್ದವರಿಗೆ ಹಕ್ಕು ಪತ್ರಕ್ಕೆ ಅರ್ಜಿ ಸಲ್ಲಿಸಲು ಹತ್ತು ವರ್ಷ ಸಮಯ ನೀಡಲಾಗಿದ್ದು, ಈಗ ಬಂದ್ ಆಗಿದೆ. ಯಾರೋ ಮಾರಿದ ಸರ್ಕಾರಿ ಜಾಗ ಖರೀದಿಸಿ ಹಕ್ಕು ಪತ್ರಕ್ಕಾಗಿ ಅತ್ತರೆ ಆಗದು. ಯಾರದ್ದೋ ಜಾಗದಲ್ಲಿ ಮನೆ ಕಟ್ಟಲು ಪಂಚಾಯಿತಿ ಪರವಾನಗಿ ಕೊಡಲು ಆಗುವುದಿಲ್ಲ ಎಂದು ತಿಳಿಸಿದರು.
ಎರಡು ಎಕರೆ ಇದ್ದವರು ನಮ್ಮದು ಕುಮ್ಕಿ ಜಮೀನು ಎಂದು ಮತ್ತೆ ಮೂರು ಎಕರೆ ಕೇಳ್ತಾರೆ. ಇದರಿಂದಾಗಿ ಏನೂ ಇಲ್ಲದವನಿಗೆ ಐದು ಸೆಂಟ್ಸ್ ಜಮೀನು ನೀಡಲು ಸಾಧ್ಯವಾಗುತ್ತಿಲ್ಲ. ಇದು ನಮ್ಮ ಸಮಸ್ಯೆ ಎಂದು ಖೇದ ವ್ಯಕ್ತಪಡಿಸಿದರು.
ಹರೇಕಳ ಖಾಸಗಿ ಶಿಕ್ಷಣ ಸಂಸ್ಥೆಯಿಂದ ಒಂದೂವರೆ ಲಕ್ಷ ತೆರಿಗೆ ಬಾಕಿಯಿದೆ ಎಂದು ಪಿಡಿಒ ಮುತ್ತಪ್ಪ ಡಿ. ತಿಳಿಸಿದರು.
ಎಂಸಿಎ ಪ್ರವೇಶಾತಿಗಾಗಿ ಸೀಟು ಅರಸಿಕೊಂಡು ಬಂದ ಓರ್ವ ವಿದ್ಯಾರ್ಥಿನಿ, ಖಾಸಗಿ ಕಾಲೇಜಿನಲ್ಲಿ ಸೀಟು ಕೊಡಿಸುವಂತೆ ಖಾದರ್ ಅವರಲ್ಲಿ ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷೆ ಗುಲಾಬಿ, ಉಪಾಧ್ಯಕ್ಷ ಎಂ.ಪಿ.ಅಬ್ದುಲ್ ಮಜೀದ್, ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್, ಜಲಜೀವನ್ ಮಿಷನ್ ಸಹಾಯಕ ಅಭಿಯಂತ ಶಿವಣ್ಣ, ತಾಪಂ ಮಾಜಿ ಸದಸ್ಯ ಮಹಮ್ಮದ್ ಮುಸ್ತಫಾ ಮಲಾರ್, ಗ್ರಾಪಂ ಮಾಜಿ ಅಧ್ಯಕ್ಷೆ ಅನಿತಾ ಡಿಸೋಜ, ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್, ಅಬ್ದುಲ್ ಸತ್ತಾರ್ ಬಾವಲಿಗುಲಿ, ಹನೀಫ್, ರಫೀಕ್, ಎಸ್.ಎಂ.ಬಶೀರ್, ಮಾಜಿ ಸದಸ್ಯ ಬಶೀರ್ ಉಂಬುದ ಮೊದಲಾದವರು ಉಪಸ್ಥಿತರಿದ್ದರು. ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಸ್ವಾಗತಿಸಿದರು. ಮುತ್ತಪ್ಪ ಡಿ. ವಂದಿಸಿದರು.